ಹೆಜಮಾಡಿ ಕ್ರೀಡಾಂಗಣ ಅಭಿವೃದ್ಧಿಗೆ 3 ಕೋಟಿ ರೂ. ಮಂಜೂರು: ವಿನಯಕುಮಾರ್ ಸೊರಕೆ
ಪಡುಬಿದ್ರೆ, ಸೆ. 5: ಹೆಜಮಾಡಿಯ ಬಸ್ತಿಪಡ್ಪು ರಾಜೀವಗಾಂಧಿ ಕ್ರೀಡಾಂಗಣವನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಕ್ರೀಡಾ ಇಲಾಖೆಯ ಮೂಲಕ 3 ಕೋಟಿ ರೂ. ಅನುದಾನ ನೀಡಿದ್ದು, ಟೆಂಡರ್ ಹಂತದಲ್ಲಿದೆ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಹೆಜಮಾಡಿ ಸರ್ಕಾರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಮಂಗಳವಾರ ಹೆಜಮಾಡಿ ಕ್ರೀಡಾಂಗಣದಲ್ಲಿ ನಡೆದ ಉಡುಪಿ ತಾಲೂಕು (ದಕ್ಷಿಣ ವಲಯ) ಮಟ್ಟದ ಬಾಲಕರ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೆಜಮಾಡಿ ಕ್ರೀಡಾಂಗಣವನ್ನು ಕ್ರಿಕೆಟ್ ಮಂಡಳಿಯವರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣವನ್ನಾಗಿಸುವ ಸಲುವಾಗಿ ಮಾತುಕತೆ ನಡೆಸಿದ್ದು, ಗ್ರಾಮಸ್ಥರ ಸಲಹೆ ಮೇರೆಗೆ ಮುಂದುವರಿಯಲಾಗುವುದು ಎಂದವರು ಹೇಳಿದರು.
ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ ಕ್ರೀಡಾಕೂಟ ಉದ್ಘಾಟಿಸಿ ಶುಭ ಹಾರೈಸಿದರು.
ಹೆಜಮಾಡಿ ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ತಾಪಂ ಸದಸ್ಯೆ ರೇಣುಕಾ ಪುತ್ರನ್, ಪದವಿ ಪೂರ್ವ ಶಿಕ್ಷಣ ಇಲಾಖಾ ಉಪ ನಿರ್ದೇಶಕಿ ವಿಜಯಲಕ್ಷ್ಮೀ ನಾಯಕ್, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ನಾರಾಯಣ ಎಸ್ ಪೂಜಾರಿ, ಗ್ರಾಮ ಪಂ. ಸದಸ್ಯ ಶಿವರಾಮ ಶೆಟ್ಟಿ, ಮಾಜಿ ಸದಸ್ಯ ಅಬ್ದುಲ್ ರಹಿಮಾನ್, ದಲಿತ ಮುಖಂಡ ಶೇಖರ್ ಹೆಜ್ಮಾಡಿ, ಸುಧಾಕರ ಕೆ., ಕ್ರೀಡಾ ಸಂಯೋಜಕ ಚಂದ್ರಶೇಖರ ಶೆಟ್ಟಿ, ಕಾಲೇಜು ಪ್ರಾಂಶುಪಾಲ ವಿನ್ಸೆಂಟ್ ವಿನೋದಾ ಡಿಸೋಜಾ, ಹೈಸ್ಕೂಲ್ ಮುಖ್ಯ ಶಿಕ್ಷಕಿ ಸವಿತಾ ಆರ್.ನಾಯಕ್ ಮುಖ್ಯ ಅತಿಥಿಗಳಾಗಿದ್ದರು.