×
Ad

ಅಪಘಾತಕ್ಕೀಡಾದ ಸೈನಿಕರಿಗೆ ನೆರವಾದ ಕಾಶ್ಮೀರಿ ಯುವಕರು

Update: 2017-09-05 18:50 IST

ಶ್ರೀನಗರ,ಸೆ.5: ಕ್ರುದ್ಧ ಯುವಕರು ಪೊಲೀಸರು ಮತ್ತು ಯೋಧರತ್ತ ಕಲ್ಲುತೂರಾಟ ನಡೆಸುತ್ತಿರುವ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಕಾಶ್ಮೀರದಿಂದ ಹೊರಬೀಳುತ್ತಿರುವ ಅತ್ಯಂತ ಸಾಮಾನ್ಯ ಚಿತ್ರಗಳಾಗಿಬಿಟ್ಟಿವೆ. ಕಳೆದ ರವಿವಾರ, ಬಕ್ರೀದ್‌ನ ಮರುದಿನ ರಾತ್ರಿ ಬುಡ್ಗಾಂವ್ ಜಿಲ್ಲೆಯಲ್ಲಿ ಸೇನಾ ವಾಹನವೊಂದು ಸ್ಕಿಡ್ ಆಗಿ ಅಪಘಾತ ಸಂಭವಿಸಿದ್ದಾಗ ಕಾಶ್ಮೀರಿ ಯುವಕರ ತಂಡವೊಂದು ಯೋಧರಿಗೆ ನೆರವಾಗುತ್ತಿರುವ ಚಿತ್ರಣವೊಂದು ಈ ಏಕತಾನತೆಯಲ್ಲಿ ಬದಲಾವಣೆಯನ್ನು ತಂದಿದೆ.

ಈ ಮಾನವೀಯತೆಯ ದೃಶ್ಯವನ್ನು ಸೆರೆ ಹಿಡಿದಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದು ನಿಜವಾದ ‘ಕಾಶ್ಮೀರಿಯತ್’ ಎಂದು ಹೆಚ್ಚಿನವರು ಪ್ರಶಂಸಿಸಿದ್ದಾರೆ. ಒಂದೂವರೆ ನಿಮಿಷಗಳ ಈ ವೀಡಿಯೊ ಅಡಿಮೇಲಾಗಿ ಬಿದ್ದ ಸೇನಾ ವಾಹನ ಮತ್ತು ಕೆಲವು ಕಾಶ್ಮೀರಿ ಯುವಕರು ಅದರಿಂದ ಹೊರಗೆ ಬರಲು ಯೋಧರಿಗೆ ನೆರವಾಗುತ್ತಿರುವ ದೃಶ್ಯವನ್ನೊಳಗೊಂಡಿದೆ. ಈ ಯುವಕರು ಯೋಧರಿಗೆ ಕುಡಿಯಲು ನೀರು ಮತ್ತು ಅವರ ಗಾಯಗಳಿಗೆ ಪ್ರಥಮ ಚಿಕಿತ್ಸೆ ಒದಗಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

 ‘‘ಸ್ಥಳೀಯರ ಔದಾರ್ಯಕ್ಕಾಗಿ ಚಿನಾರ್ ಕಾರ್ಪ್ಸ್‌ನ ಕಮಾಂಡರ್ ಲೆಜಜೆ.ಎಸ್ ಸಂಧು ಅವರು ಕೃತಜ್ಞತೆಗಳನ್ನು ಹೇಳಿದ್ದಾರೆ. ಇದು ಜನರು ಪರಸ್ಪರರಿಗೆ ನೆರವಾಗುವ ಕಾಶ್ಮೀರಿಯತ್ ಮತ್ತು ಇನ್ಸಾನಿಯತ್(ಮಾನವೀಯತೆ)ನ ನಿಜವಾದ ಸಂಕೇತವಾಗಿದೆ. ಇದು ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಮತ್ತು ಯೋಧರ ನಡುವೆ ಗೆಳೆತನವನ್ನು ಗಟ್ಟಿಗೊಳಿಸಲಿದೆ’’ ಎಂದು ರಕ್ಷಣಾ ವಕ್ತಾರ ಕರ್ನಲ್ ರಾಜೇಶ ಕಾಲಿಯಾ ಹೇಳಿದರು.

ಚಡೂರಾದ ಚೆಕ್-ಎ-ಪೆಹ್ರೋ ಗ್ರಾಮದ ನಿವಾಸಿಗಳು ಅಪಘಾತದಲ್ಲಿ ಗಾಯ ಗೊಂಡಿದ್ದ ಯೋಧರ ನೆರವಿಗೆ ತಕ್ಷಣವೇ ಧಾವಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಾಶ್ಮೀರಿ ಯುವಕರ ಈ ಕಾರ್ಯ ಕಾಶ್ಮೀರಿಯತ್ ಆಗಿದೆ ಎಂದು ಕಾಂಗ್ರೆಸ ರಾಜಕಾರಣಿ ಸಲ್ಮಾನ್ ನಿಝಾಮಿ ಟ್ವೀಟಿಸಿದ್ದರೆ, ನಾವು ಪರಸ್ಪರರಿಗೆ ಸೇರಿದವರು ಎನ್ನುವುದನ್ನು ನಾವು ಮರೆತಿಲ್ಲ ಎಂದು ಈ ಅಪಘಾತವು ತೋರಿಸಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸದಸ್ಯೆ ರಬಿಯಾ ನೂರ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News