ನಾಲೆ ದಾಟುವ ಸೇತುವೆ ಶಿಥಿಲ: ರೋಗಿಯನ್ನು ಮಂಚಸಹಿತ ಹೊತ್ತು ಚಿಕಿತ್ಸೆಗೆ ದಾಖಲಿಸಿದ ಸ್ಥಳೀಯರು
ಮುಂಬೈ, ಸೆ.5: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲು ಆತನನ್ನು ಮಂಚದ ಮೇಲೆ ಮಲಗಿಸಿ ಸುಮಾರು 1 ಕಿ.ಮೀ. ದೂರ ಹೊತ್ತುಕೊಂಡು ಸಾಗಿರುವ ಘಟನೆ ಮಹಾರಾಷ್ಟ್ರದ ಗದ್‌ಚಿರೊಲಿ ಎಂಬಲ್ಲಿ ನಡೆದಿದೆ. ಇಷ್ಟು ಕಷ್ಟಪಟ್ಟು ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಆ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಜುವ್ವಿ ಗ್ರಾಮದ ಕರ್ಪ ಪುಂಗಟಿ ಎಂಬಾತ ರವಿವಾರ ಬೆಳಿಗ್ಗೆ ವಾಂತಿ ಮತ್ತು ಹೊಟ್ಟೆನೋವಿನಿಂದ ಅಸೌಖ್ಯಗೊಂಡಾಗ ಕುಟುಂಬದ ಸದಸ್ಯರು ಭಮ್ರಗರ ಗ್ರಾಮೀಣ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗದ ಪ್ರಭಾರ ವೈದ್ಯಾಧಿಕಾರಿ ಡಾ ಪ್ರಣಯ್ ಮಂಡಲ್‌ಗೆ ಕರೆಮಾಡಿದ್ದಾರೆ. ತಕ್ಷಣ ಆಸ್ಪತ್ರೆಯ ಅಧಿಕಾರಿಗಳು ರೋಗಿಯನ್ನು ಆಸ್ಪತ್ರೆಗೆ ಕರೆತರಲು ಆ್ಯಂಬುಲೆನ್ಸ್ ಕಳಿಸಿಕೊಟ್ಟಿದ್ದಾರೆ. ಆದರೆ ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಪ್ರವಾಹದ ಕಾರಣ ಭಮ್ರಗರ್ ಮತ್ತು ಜುವ್ವಿ ಗ್ರಾಮದ ನಡುವೆ ಇರುವ ನಾಲೆಗೆ ಕಟ್ಟಲಾಗಿದ್ದ ಸೇತುವೆ ಶಿಥಿಲಗೊಂಡಿದ್ದು ಇದರ ಮೇಲೆ ಆ್ಯಂಬುಲೆನ್ಸ್ ಸಂಚರಿಸಿದರೆ ಅಪಾಯ ಎಂದು ಅಧಿಕಾರಿಗಳು ತಿಳಿಸಿದರು. ಆಗ ಅನಿವಾರ್ಯವಾಗಿ ರೋಗಿಯನ್ನು ಮಂಚ ಸಹಿತ ಎತ್ತಿಕೊಂಡು ಸುಮಾರು 1 ಕಿ.ಮೀ. ದೂರ ಸಾಗಿಬಂದು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ರವಿವಾರ ರೋಗಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಈ ಪರಿಸರದಲ್ಲಿ ನಾಲೆ ದಾಟಲು ಸೂಕ್ತ ಸೇತುವೆ ವ್ಯವಸ್ಥೆ ಇಲ್ಲದ ಕಾರಣ ಭಾರೀ ಸಮಸ್ಯೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.