×
Ad

2.09 ಲಕ್ಷ ಸಂಸ್ಥೆಗಳ ನೋಂದಣಿ ರದ್ದು : ಕೇಂದ್ರ ಸರಕಾರ

Update: 2017-09-05 21:32 IST

ಹೊಸದಿಲ್ಲಿ, ಸೆ.5: ಕಾನೂನು ಅವಶ್ಯಕತೆಗಳನ್ನು ಪೂರೈಸಲು ವಿಫಲವಾಗಿರುವ 2.09 ಲಕ್ಷಕ್ಕೂ ಹೆಚ್ಚು ಸಂಸ್ಥೆಗಳ ಹೆಸರನ್ನು ಕಂಪೆನಿಗಳ ನೋಂದಣಿ ದಾಖಲೆಯಿಂದ ತೆಗೆದುಹಾಕಲಾಗಿದ್ದು , ಈ ಸಂಸ್ಥೆಗಳ ಬ್ಯಾಂಕ್ ಖಾತೆ ನಿರ್ವಹಣೆಯನ್ನು ನಿರ್ಬಂಧಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ  ಸರಕಾರ ತಿಳಿಸಿದೆ.

ತೆರಿಗೆ ತಪ್ಪಿಸುವ ಹಾಗೂ ಅಕ್ರಮ ಹಣ ವರ್ಗಾವಣೆಗಾಗಿ ಹುಟ್ಟುಹಾಕಲಾಗಿರುವ ಬೇನಾಮಿ ಸಂಸ್ಥೆಗಳ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿರುವ ಸರಕಾರ, ಈ ಕಂಪೆನಿಗಳು ತಮ್ಮ ವ್ಯವಹಾರವನ್ನು ಕಾನೂನುಬದ್ಧವಾಗಿ ನಡೆಸುವವರೆಗೆ ಈ ಕಂಪೆನಿಗಳು ತಮ್ಮ ಬ್ಯಾಂಕ್ ಖಾತೆ ನಿರ್ವಹಿಸುವುದನ್ನು ನಿಬರ್ಂಧಿಸಿರುವುದಾಗಿ ತಿಳಿಸಿದೆ.

 ಕಂಪೆನಿಗಳ ಕಾಯ್ದೆಯ ಸೆಕ್ಷನ್ 248(5)ರಡಿ 2,09,032 ಕಂಪೆನಿಗಳ ಹೆಸರನ್ನು ಕಂಪೆನಿಗಳ ನೋಂದಣಿ ದಾಖಲೆಯಿಂದ ತೆಗೆದುಹಾಕಲಾಗಿದೆ. ಇಂತಹ ಕಂಪೆನಿಗಳ ಹಾಲಿ ನಿರ್ದೇಶಕರು ಇನ್ನುಮುಂದೆ ಮಾಜಿ ನಿರ್ದೇಶಕರಾಗಿರುತ್ತಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇಂತಹ ಕಂಪೆನಿಗಳ ಬ್ಯಾಂಕ್ ಖಾತೆಗಳ ನಿರ್ವಹಣೆಯನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಆರ್ಥಿಕ ಸೇವೆಗಳ ವಿಭಾಗವು ಭಾರತೀಯ ಬ್ಯಾಂಕ್‌ಗಳ ಸಂಘಟನೆಯ ಮೂಲಕ ಎಲ್ಲಾ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.

  ಈ ಸಂಸ್ಥೆಗಳನ್ನು ಕಾನೂನುಬದ್ಧಗೊಳಿಸಿದ ಬಳಿಕ ಈ ಕಂಪೆನಿಗಳ ಹೆಸರನ್ನು ‘ರದ್ದುಗೊಳಿಸಿರುವ’ ವಿಭಾಗದಿಂದ ತೆಗೆದು ‘ಸಕ್ರಿಯ’ ವಿಭಾಗದಲ್ಲಿ ಸೇರಿಸಲಾಗುವುದು ಎಂದು ಸರಕಾರ ತಿಳಿಸಿದೆ. ಅಲ್ಲದೆ ಇತರ ಸಂಸ್ಥೆಗಳೊಡನೆ ವ್ಯವಹಾರ ನಡೆಸುವ ಸಂದರ್ಭ ಗರಿಷ್ಠ ಜಾಗರೂಕತೆ ವಹಿಸುವಂತೆ ತಿಳಿಸಿದೆ. ಕೆಲವು ಸಂಸ್ಥೆಗಳು ಕಾರ್ಪೊರೇಟರ್ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ‘ಸಕ್ರಿಯ’ ಸ್ಥಾನಮಾನ ಪಡೆದಿದ್ದರೂ, ವಾರ್ಷಿಕ ವರದಿ ಸೇರಿದಂತೆ ಹಣಕಾಸು ವಿವರಣೆ ಕುರಿತ ದಾಖಲೆಯನ್ನು ಕ್ರಮಬದ್ಧವಾಗಿ ಸಲ್ಲಿಸಿರುವುದಿಲ್ಲ. ಇಂತಹ ಕಂಪೆನಿಗಳೊಡನೆ ವ್ಯವಹರಿಸುವಾಗ ಗರಿಷ್ಟ ಎಚ್ಚರಿಕೆ ಅಗತ್ಯ ಎಂದು ತಿಳಿಸಲಾಗಿದೆ.

ಸುದೀರ್ಘ ಕಾಲಾವಧಿಯಲ್ಲಿ ನಿಷ್ಕ್ರಿಯವಾಗಿರುವುದೂ ಸೇರಿದಂತೆ ಹಲವು ಕಾರಣಗಳಿಗೆ ಕಂಪೆನಿಗಳ ಹೆಸರನ್ನು ನೋಂದಣಿ ಪುಸ್ತಕದಿಂದ ತೆಗೆದುಹಾಕಲು ಕಂಪೆನಿಗಳ ಕಾಯ್ದೆಯ ಸೆಕ್ಷನ್ 248ರಲ್ಲಿ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News