×
Ad

ಪೊಲೀಸ್ ಕಾನ್‌ಸ್ಟೇಬಲ್ ಗೆ ಹಲ್ಲೆ ಆರೋಪ: ಓರ್ವನ ಬಂಧನ

Update: 2017-09-05 21:40 IST

ಕೊಣಾಜೆ, ಸೆ. 5: ದೇರಳಕಟ್ಟೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರೊಬ್ಬರು ಬೈಕಿನ ದಾಖಲೆ ಕೇಳಿದಕ್ಕೆ ಇಬ್ಬರು ಯುವಕರು ಹಲ್ಲೆ ಮಾಡಿದ್ದಾರೆ ಎನ್ನಲಾದ ಘಟನೆ ಸೋಮವಾರ ರಾತ್ರಿ ನಡೆದಿದೆ. ಹಲ್ಲೆ ನಡೆಸಿದ ಓರ್ವನನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. 

ಉಳ್ಳಾಲ ಮುಕ್ಕಚ್ಚೇರಿಯ ಇಜಾಝ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇಜಾಝ್  ಹಾಗೂ ಇನ್ನೋರ್ವ ಬೈಕ್ ಮೂಲಕ ನಾಟೆಕಲ್ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಹೆಡ್‌ಲೈಟ್ ಇಲ್ಲದ ವಾಹನವನ್ನು ದೇರಳಕಟ್ಟೆ ಬಳಿ ಪೊಲೀಸ್ ಕಾನ್‌ಸ್ಟೇಬಲ್ ಪ್ರೇಮ್ ಹಾಗೂ ಹೋಮ್‌ಗಾರ್ಡ್ ರಮೇಶ್ ಎಂಬವರು ನಿಲ್ಲಿಸಿ ತಪಾಸಣೆ ನಡೆಸಿದಾಗ ಬೈಕ್‌ನಲ್ಲಿ ನಂಬರ್‌ಪ್ಲೇಟ್ ಕೂಡಾ ಇರಲಿಲ್ಲ ಎನ್ನಲಾಗಿದೆ. ಈ ಸಂದರ್ಭದಲ್ಲಿ ವಾಹನದ ದಾಖಲೆ ಕೇಳಿದಾಗ ಇಬ್ಬರು ಆರೋಪಿಗಳು ಪೊಲೀಸರಿಗೆ ಬೆದರಿಕೆಯೊಡ್ಡಿ, ದೂಡಿ ಹಾಕಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳು ಪೊಲೀಸ್ ಪ್ರೇಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದ ಬಳಿಕ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳಲ್ಲಿ ಓರ್ವನನ್ನು ಗಸ್ತು ತಿರುಗುತ್ತಿದ್ದ ಪೊಲೀಸರು ಬಂಧಿಸಿದ್ದು, ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೊಣಾಜೆ ಠಾಣೆ ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News