ಪೊಲೀಸರು ಅನುಮತಿ ನೀಡದಿದ್ದರೂ ಜಿಲ್ಲೆಯೊಳಗಡೆ ಬೈಕ್ ರ್ಯಾಲಿ -ಸಂಜೀವ ಮಟಂದೂರು
ಮಂಗಳೂರು, ಸೆ. 5: ಪೊಲೀಸರು ಅನುಮತಿ ನಿರಾಕರಿಸಿದರೂ ಜಿಲ್ಲೆಯ ಒಳಗಡೆ ಮಂಗಳೂರು ಬೈಕ್ ರ್ಯಾಲಿಯನ್ನು ಸೆ.7ರಂದು ನಡೆಸಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಟಂದೂರು ಸುದ್ದಿ ಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದ ವಿವಿಧ ಕಡೆಗಳಿಂದ ಆರಂಭಗೊಂಡ ರ್ಯಾಲಿಗೆ ರಾಜ್ಯ ಸರಕಾರ ಪೊಲೀಸರ ಮೂಲಕ ತಡೆಯೊಡ್ಡುತ್ತಿದೆ. ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಯವರನ್ನು ಬಂಧಿಸಿರುವುದು ಖಂಡನೀಯ. ಇದರೊಂದಿಗೆ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅಘೋಷಿತ ಕರ್ಪ್ಯೂ ಹೇರಿದ ವಾತಾವರಣ ನಿರ್ಮಾಣವಾಗಿದೆ. ಆದರೆ ಈಗಾಗಲೇ ನಿಗದಿಪಡಿಸಿದಂತೆ ಸೆ. 7ರಂದು ಮಂಗಳೂರಿನಲ್ಲಿ 10 ಸಾವಿರ ಕ್ಕೂ ಅಧಿಕ ಮಂದಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಸಹಿತ ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ. ನಗರದ ನೆಹರೂ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸಂಜೀವ ಮಟಂದೂರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ರುಕ್ಮಯ ಪೂಜಾರಿ, ಉಮಾನಾಥ ಕೊಟ್ಯಾನ್, ಕಸ್ತೂರಿ ಪಂಜ, ಕಿಶೋರ್, ರಾಜೇಶ್ ಕೊಟ್ಟಾರಿ, ಕ್ಯಾ.ಬ್ರಿಜೇಶ್, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ನಮಿತಾ ಶ್ಯಾಂ ಮೊದಲಾದವರು ಉಪಸ್ಥಿತರಿದ್ದರು.