×
Ad

ಮ್ಯಾನ್ಮಾರ್‌ನಿಂದ ಹಿಂದೂಗಳೂ ಪಲಾಯನ: ಬಾಂಗ್ಲಾದೇಶದಲ್ಲಿ ಆಶ್ರಯ

Update: 2017-09-05 22:48 IST

ಢಾಕಾ, ಸೆ. 5: ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಬೆದರಿ ಆ ದೇಶದಿಂದ ಬಾಂಗ್ಲಾದೇಶಕ್ಕೆ ಮುಸ್ಲಿಮರು ಮಾತ್ರ ಪಲಾಯನಗೈಯುತ್ತಿಲ್ಲ. ಹಿಂಸೆಯಲ್ಲಿ ತಮ್ಮ ಸಮುದಾಯದ 86 ಮಂದಿ ಮೃತಪಟ್ಟ ಬಳಿಕ, ಬೌದ್ಧ ಪ್ರಾಬಲ್ಯದ ಮ್ಯಾನ್ಮಾರ್‌ನಲ್ಲಿ ವಾಸಿಸುತ್ತಿರುವ ಹಿಂದೂಗಳೂ ಬಾಂಗ್ಲಾದೇಶದಲ್ಲಿ ಆಶ್ರಯ ಕೋರಲು ಆ ದೇಶಕ್ಕೆ ಪಲಾಯನಗೈದಿದ್ದಾರೆ.

ಮ್ಯಾನ್ಮಾರ್‌ನೊಂದಿಗೆ ಗಡಿ ಹಂಚಿಕೊಂಡಿರುವ ಬಾಂಗ್ಲಾದೇಶದ ಕಾಕ್ಸ್ ಬಝಾರ್‌ಗೆ ಸುಮಾರು 500 ಹಿಂದೂಗಳು ಆಗಮಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘‘ಮ್ಯಾನ್ಮಾರ್‌ನ ರಖೈನ್ ರಾಜ್ಯದ ಒಟ್ಟು 414 ಹಿಂದೂಗಳು ಕಾಕ್ಸ್ ಬಝಾರ್‌ನಲ್ಲಿರುವ ಹಿಂದೂ ಗ್ರಾಮವೊಂದರಲ್ಲಿ ಆಶ್ರಯ ಪಡೆದಿದ್ದಾರೆ’’ ಎಂದು ಬಾಂಗ್ಲಾದೇಶದ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.

ಆದರೆ, ಇಲ್ಲಿ ಆಶ್ರಯ ಪಡೆದಿರುವ ಹಿಂದೂ ನಿರಾಶ್ರಿತರ ಸಂಖ್ಯೆ 510 ಎಂಬುದಾಗಿ ಗ್ರಾಮಕ್ಕೆ ಭೇಟಿ ನೀಡಿರುವ ‘ಬಾಂಗ್ಲಾದೇಶ್ ಹಿಂದೂ-ಬುದ್ಧಿಸ್ಟ್-ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್’ನ ಅಧ್ಯಕ್ಷ ರಾಣಾ ದಾಸ್‌ಗುಪ್ತ ತಿಳಿಸಿದರು.

 ‘‘ಕಪ್ಪು ಬಟ್ಟೆಗಳನ್ನು ಧರಿಸಿದ ಹಾಗೂ ಮುಸುಕು ಹಾಕಿಕೊಂಡ ಅಪರಿಚಿತ ವ್ಯಕ್ತಿಗಳು ಮ್ಯಾನ್ಮಾರ್‌ನ ಮಂಗ್ಡು ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಆಗಸ್ಟ್ 27 ಮತ್ತು 28ರಂದು ತಮ್ಮ ಮನೆಗಳ ಮೇಲೆ ದಾಳಿ ನಡೆಸಿದರು ಹಾಗೂ ಈ ದಾಳಿಗಳಲ್ಲಿ 86 ಮಂದಿ ಮೃತಪಟ್ಟರು ಎಂದು ಹಿಂದೂ ನಿರಾಶ್ರಿತರು ಹೇಳಿದ್ದಾರೆ’’ ಎಂದು ದಾಸ್‌ಗುಪ್ತ ನುಡಿದರು.

ಈ ಹಿಂದೂಗಳನ್ನು ರೊಹಿಂಗ್ಯ ಮುಸ್ಲಿಮರು ಗಡಿವರೆಗೆ ಕರೆ ತಂದರು ಹಾಗೂ ಬಳಿಕ ಅವರು ಇತರ ಸಾವಿರಾರು ಮಂದಿಯೊಂದಿಗೆ ಬಾಂಗ್ಲಾದೇಶವನ್ನು ಪ್ರವೇಶಿಸಿದರು ಎಂದು ಅವರು ತಿಳಿಸಿದರು.

‘‘ಮ್ಯಾನ್ಮಾರ್‌ನ ಹಿಂದೂಗಳ ಮೇಲೆ ನಡೆದ ದಾಳಿಯ ಬಗ್ಗೆ ತನಿಖೆ ನಡೆಯಬೇಕು ಹಾಗೂ ಅಪರಾಧಿಗಳಿಗೆ ಶಿಕ್ಷೆಯಾಗಬೇಕು’’ ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News