ರೊಹಿಂಗ್ಯ ಮುಸ್ಲಿಮರನ್ನು ಯಾಕೆ ಗಡೀಪಾರು ಮಾಡಲು ಬಯಸಿದ್ದೀರಿ?

Update: 2017-09-05 17:53 GMT

ಹೊಸದಿಲ್ಲಿ, ಸೆ.5: ಸಾವಿರಾರು ರೊಹಿಂಗ್ಯ ಮುಸ್ಲಿಮರನ್ನು ಮ್ಯಾನ್ಮಾರ್‌ಗೆ ಗಡೀಪಾರು ಮಾಡುವ ನಿರ್ಧಾರದ ಬಗ್ಗೆ ವಿವರವಾದ ಉತ್ತರ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

  ರೊಹಿಂಗ್ಯ ಮುಸ್ಲಿಮ್ ನಿರಾಶ್ರಿತರೂ ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ಅಕ್ರಮ ವಲಸಿಗರನ್ನು ಗುರುತಿಸಿ ಗಡೀಪಾರು ಮಾಡುವಂತೆ ಕಳೆದ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಸರಕಾರಗಳಿಗೂ ಪತ್ರ ಬರೆದಿತ್ತು. ನಿರಾಶ್ರಿತರು ಸಂಪನ್ಮೂಲಕ್ಕೆ ಒಂದು ಹೊರೆಯಾಗಿದ್ದು ಭದ್ರತೆ, ಸುರಕರ್ಷತೆಗೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

  ಕೇಂದ್ರ ಸರಕಾರದ ನಿರ್ಧಾವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಲು ಸೆ.1ರಂದು ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು. ಕೇಂದ್ರ ಸರಕಾರದ ನಿರ್ಧಾರ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಅರ್ಜಿಯ ತ್ವರಿತ ವಿಚಾರಣೆಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣ ವಿವರಣೆ ನೀಡುವಂತೆ ಸರಕಾರಕ್ಕೆ ಸೂಚಿಸಿರುವ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆಯನ್ನು ಸೆ.11ಕ್ಕೆ ನಿಗದಿಗೊಳಿಸಿದೆ.

ಆಗಸ್ಟ್ 25ರಿಂದ ದೇಶದಲ್ಲಿ ಒಟ್ಟು 90 ಘರ್ಷಣೆ ಪ್ರಕರಣ ನಡೆದಿದ್ದು ಇದರಲ್ಲಿ 30 ಆಕ್ರಮಣಗಳು ಅಕ್ರಮ ಪ್ರವೇಶಿಸಿದವರಿಂದ ನಡೆದಿದೆ ಎಂದು ಸೇನೆ ತಿಳಿಸಿದೆ. ರೊಹಿಂಗ್ಯ ಮುಸ್ಲಿಮರಿಗೆ ಪೌರತ್ವ ನೀಡಲು ಮ್ಯಾನ್ಮಾರ್ ನಿರಾಕರಿಸಿದ್ದು ಅವರನ್ನು ಅಕ್ರಮ ವಲಸಿಗರು ಎಂದು ಗುರುತಿಸಿದೆ. ಆ ದೇಶದ ಸೇನಾಪಡೆ ಹಾಗೂ ಬಹುಸಂಖ್ಯಾತರಾಗಿರುವ ಬೌದ್ಧ ಧರ್ಮೀಯರು ರೊಹಿಂಗ್ಯ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಸಾವಿರಾರು ರೊಹಿಂಗ್ಯ ಮುಸ್ಲಿಮರು ಗಡಿದಾಟಿ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ. ಆದರೆ ಅಲ್ಲಿ ಕೂಡಾ ಅವರಿಗೆ ನೆಲೆ ಇಲ್ಲ ಎಂಬಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News