ಶಿಕ್ಷಕರಿಗೆ ಶೀಘ್ರ ವೇತನ ಹೆಚ್ಚಳ : ಯು.ಟಿ.ಖಾದರ್
ಮಂಗಳೂರು, ಸೆ.5: ಶಿಕ್ಷಕರಿಗೆ ವೇತನ ಹೆಚ್ಚಳ ಮಾಡಿರುವ ಆದೇಶವನ್ನು ಮುಖ್ಯಮಂತ್ರಿ 6ನೇ ಹಣಕಾಸು ಅಯೋಗಕ್ಕೆ ಶೀಘ್ರ ನೀಡುವ ನಿರೀಕ್ಷೆ ಇದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ಮಂಗಳವಾರ ಶಿಕ್ಷಕರ ದಿನದ ಪ್ರಯುಕ್ತ ಜಪ್ಪಿನಮೊಗರು ಪ್ರೆಸ್ಟೀಜ್ ಇಂಟರ್‌ನ್ಯಾಷನಲ್ ಶಾಲಾ ಸಭಾಂಗಣದಲ್ಲಿ ನಡೆದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಗುರುಚೇತನ’ ಪುಸ್ತಕ ಬಿಡುಗಡೆಗೊಳಿಸಿದ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಸಮಾಜ, ದೇಶದ ಅಭಿವೃದ್ಧಿ, ರಕ್ಷಣೆಗೆ ಸೂಕ್ತ ಪ್ರಜೆಗಳು ಅಗತ್ಯ, ಅಂತಹ ಪ್ರಜೆಗಳನ್ನು ನಿರ್ಮಿಸುವ ಜವಾಬ್ದಾರಿ ಶಿಕ್ಷಕರು ಮಾಡುತ್ತಿದ್ದಾರೆ. ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಕೊಂಡಿರುವ ಶಿಕ್ಷಕರಿಗಾಗಿ ರಾಧಾಕೃಷ್ಣನ್ ತಮ್ಮ ದಿನಗಳನ್ನು ಮೀಸಲಿಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞ್ಞಾನೇಶ್ ಹಾಗೂ ದಕ್ಷಿಣ ವಲಯದಲ್ಲಿ ಶಿಕ್ಷಕರಾಗಿದ್ದು ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕವಿತಾ ಸನಿಲ್, ಕಾರ್ಪೊರೇಟರ್ ಸುರೇಂದ್ರ, ಜಿಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾಪಂ ಸದಸ್ಯರಾದ ಅಬ್ದುಲ್ ಜಬ್ಬಾರ್ ಬೋಳಿಯಾರ್, ಸುರೇಖ ಚಂದ್ರಹಾಸ, ಶಶಿಪ್ರಭಾ ಶೆಟ್ಟಿ, ಉಳ್ಳಾಲ ನಗರ ಸಭಾಧ್ಯಕ್ಷ ಹುಸೈನ್ ಕುಂಞಿಮೋನು, ತಾಪಂ ಇಒ ಸದಾನಂದ, ಕ್ಷೇತ್ರ ಸಮನ್ವಯಾಧಿಕಾರಿ ಗೀತಾ ಶಾನುಭಾಗ್, ಅನುದಾನಿತ ಶಾಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ, ಶಿಕ್ಷಕರ ವಿವಿಧ ಸಂಘಗಳ ಮುಖಂಡರಾದ ಎಂ. ಎಚ್. ಮಲಾರ್, ಅಶೋಕ್, ದೇವಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ರವಿಶಂಕರ್ ಹರೇಕಳ ಪ್ರಾರ್ಥಿಸಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತ್ಯಾಗಂ ಹರೇಕಳ ಹಾಗೂ ಸಿಆರ್‌ಪಿ ಶಿಲಾವತಿ ಕಾರ್ಯಕ್ರಮ ನಿರೂಪಿಸಿದರು.
ಅತಿಥಿಗಳಿಗೆ ಕಪ್ಪುಪಟ್ಟಿ, ಪ್ರತಿಭಟನಾ ಬ್ಯಾನರ್ ಸ್ವಾಗತ
ಅನುದಾನಿತ ಶಾಲಾ ಶಿಕ್ಷಕರ ಬಗ್ಗೆ ಸರಕಾರ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿ ಕಪ್ಪುಪಟ್ಟಿ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಆನುದಾನಿತ ಶಾಲಾ ಶಿಕ್ಷಕರ ಸಂಘ ತೀರ್ಮಾನಿಸಿದಂತೆ ಶಿಕ್ಷಕರು ನಡೆದುಕೊಂಡರು. ಅಂದರೆ ಕಾರ್ಯಕ್ರಮ ಅಯೋಜಿಸಲಾಗಿದ್ದ ಶಾಲೆಯ ಗೇಟಿನಲ್ಲೂ ಬ್ಯಾನರ್ ಅಳವಡಿಸುವ ಮುಖಾಂತರ ಅತಿಥಿಗಳಿಗೆ ಕಪ್ಪು ಪಟ್ಟಿ ಪ್ರತಿಭಟನಾ ಬ್ಯಾನರ್‌ನ ಸ್ವಾಗತ ನೀಡಲಾಯಿತು. ಈ ಸಂದರ್ಭ ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್. ಲೋಬೊರಿಗೆ ಅನುದಾನಿತ ಶಾಲಾ ಶಿಕ್ಷಕರ ಸಂಘದಿಂದ 12 ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ ನೇತೃತ್ವದಲ್ಲಿ ಸಲ್ಲಿಸಲಾಯಿತು.