ಯುಎಸ್ ಓಪನ್: ಫೆಡರರ್, ನಡಾಲ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Update: 2017-09-05 18:54 GMT

ನ್ಯೂಯಾರ್ಕ್, ಸೆ.5: ರೋಜರ್ ಫೆಡರರ್ ಹಾಗೂ ರಫೆಲ್ ನಡಾಲ್ ಯುಎಸ್ ಓಪನ್‌ನ ಟೆನ್ನಿಸ್ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಸೋಮವಾರ ಒಂದು ಗಂಟೆ, 49 ನಿಮಿಷಗಳ ಕಾಲ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಫೆಡರರ್ ಜರ್ಮನಿಯ ಫಿಲಿಪ್ ಕೊಹ್ಲ್ ್ಸಕ್ರೈಬರ್‌ರನ್ನು 6-4, 6-2, 7-5 ಸೆಟ್‌ಗಳ ಅಂತರದಿಂದ ಮಣಿಸಿದರು.

 ಫೆಡರರ್ ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊರನ್ನು ಎದುರಿಸಲಿದ್ದಾರೆ. ಡೆಲ್ ಪೊಟ್ರೊ ಮತ್ತೊಂದು ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೇಲಿಯದ ಆರನೆ ಶ್ರೇಯಾಂಕದ ಡೊಮಿನಿಕ್ ಥೀಮ್‌ರನ್ನು 1-6, 2-6, 6-1, 7-6(7/1), 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. 2009ರ ಯುಎಸ್ ಓಪನ್ ಫೈನಲ್‌ನಲ್ಲಿ ಡೆಲ್ ಪೊಟ್ರೊ ಅವರು ಫೆಡರರ್‌ರನ್ನು ಮಣಿಸಿ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದರು.

 ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್ ಉಕ್ರೇನ್‌ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್‌ರನ್ನು 6-2, 6-4, 6-1 ನೇರ ಸೆಟ್‌ಗಳಿಂದ ಮಣಿಸಿದ್ದಾರೆ. ನಡಾಲ್ ಕ್ವಾರ್ಟರ್ ಫೈನಲ್‌ನಲ್ಲಿ ರಶ್ಯದ 19ರ ಹರೆಯದ ಆಂಡ್ರಿ ರುಬ್ಲೆವ್‌ರನ್ನು ಮುಖಾಮುಖಿಯಾಗಲಿದ್ದಾರೆ. ರುಬ್ಲೆವ್ ಬೆಲ್ಜಿಯಂನ ಡೇವಿಡ್ ಗಫಿನ್‌ರನ್ನು 7-5, 7-6(7/5), 6-3 ಸೆಟ್‌ಗಳಿಂದ ಮಣಿಸಿದ್ದಾರೆ. 2001ರ ಬಳಿಕ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಕಿರಿಯ ಆಟಗಾರನೆಂಬ ಕೀರ್ತಿಗೆ ಭಾಜನರಾದರು. 2001ರಲ್ಲಿ ಆ್ಯಂಡಿ ರಾಡಿಕ್ ಈ ಸಾಧನೆ ಮರೆದಿದ್ದರು.

ಫೆಡರರ್-ನಡಾಲ್ ಕ್ವಾರ್ಟರ್ ಫೈನಲ್‌ಗೆ ತಲುಪಿರುವ ಹಿನ್ನೆಲೆಯಲ್ಲಿ ಈ ಇಬ್ಬರೂ ಸೆಮಿ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಸ್ವಿಸ್ ಟಿನ್ನಿಸ್ ಮಾಂತ್ರಿಕ ಫೆಡರರ್ ಹಾಗೂ ಸ್ಪೇನ್‌ನ ನಡಾಲ್ ಈತನಕ 37 ಬಾರಿ ಮುಖಾಮುಖಿಯಾಗಿದ್ದಾರೆ. ಆದರೆ, ಯುಎಸ್ ಓಪನ್‌ನಲ್ಲೂ ಒಂದೂ ಪಂದ್ಯದಲ್ಲಿ ಸೆಣಸಾಡಿಲ್ಲ.

ಪ್ಲಿಸ್ಕೋವಾ, ಕನೆಪಿ, ಮ್ಯಾಡಿಸನ್ ಕ್ವಾರ್ಟರ್ ಫೈನಲ್‌ಗೆ

ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ ಕರೋಲಿನಾ ಪ್ಲಿಸ್ಲೋವಾ, ಎಸ್ಟೊನಿಯದ ಕೈಯಾ ಕನೆಪಿ ಹಾಗೂ ಅಮೆರಿಕದ ಮ್ಯಾಡಿಸನ್ ಕೀಸ್ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಅಗ್ರ ಶ್ರೇಯಾಂಕದ ಪ್ಲಿಸ್ಕೋವಾ ಕೇವಲ 46 ನಿಮಿಷಗಳ ಹೋರಾಟದಲ್ಲಿ ಅಮೆರಿಕದ ಜೆನ್ನಿಫರ್ ಬ್ರಾಡಿ ಅವರನ್ನು 6-1, 6-0 ಅಂತರದಿಂದ ಸೋಲಿಸಿದ್ದಾರೆ. ಈ ವರ್ಷ ಮೂರನೆ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

2016ರಲ್ಲಿ ರನ್ನರ್-ಅಪ್ ಆಗಿದ್ದ ಪ್ಲಿಸ್ಕೋವಾ ಅಂತಿಮ-8ರ ಸುತ್ತಿನಲ್ಲಿ ಅಮೆರಿಕದ ಕೊಕೊ ವಂಡೆವೆೆ ಅವರನ್ನು ಎದುರಿಸಲಿದ್ದಾರೆ. ವಂಡೆವೆೆ ಝೆಕ್ ಗಣರಾಜ್ಯದ ಲೂಸಿ ಸಫರೋವಾರನ್ನು 6-4, 7-6(7/2) ಸೆಟ್‌ಗಳಿಂದ ಮಣಿಸುವುದರೊಂದಿಗೆ ಮೊದಲ ಬಾರಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ.

ವಿಶ್ವದ ನಂ.418ನೆ ಆಟಗಾರ್ತಿ ಕನೆಪಿ ರಶ್ಯದ ಡರಿಯಾ ಕಸಟ್‌ಕಿನಾರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಎರಡನೆ ಕ್ವಾಲಿಫೈಯರ್ ಆಟಗಾರ್ತಿ ಎನಿಸಿಕೊಂಡರು.

32ರ ಹರೆಯದ ಕನೆಪಿ ವೃತ್ತಿಜೀವನದಲ್ಲಿ ಗಾಯದ ಸಮಸ್ಯೆಯನ್ನು ಎದುರಿಸುತ್ತಾ ಬಂದಿದ್ದು ಮುಂದಿನ ಸುತ್ತಿನಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್‌ರನ್ನು ಎದುರಿಸಲಿದ್ದಾರೆ.

ಕನೆಪಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಆರನೆ ಬಾರಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದು, ಯುಎಸ್ ಓಪನ್‌ನನಲ್ಲಿ ಎರಡನೆ ಬಾರಿ ಈ ಸಾಧನೆ ಮಾಡಿದ್ದಾರೆ. 2010ರಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಮ್ಯಾಡಿಸನ್ ಉಕ್ರೇನ್‌ನ ಎಲಿನಾ ಸ್ವಿಟೋಲಿನಾರನ್ನು 7-6(2), 1-6, 6-4 ಸೆಟ್‌ಗಳಿಂದ ಮಣಿಸಿದರು.

 ಮ್ಯಾಡಿಸನ್ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಜಯ ಸಾಧಿಸಿರುವ ಹಿನ್ನೆಲೆಯಲ್ಲಿ 2002ರ ಬಳಿಕ ಅಮೆರಿಕದ ನಾಲ್ವರು ಆಟಗಾರ್ತಿಯರು ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ವೀನಸ್ ವಿಲಿಯಮ್ಸ್, ಕೊಕೊ ವಂಡೆವೆೆ ಹಾಗೂ ಸ್ಲೊಯಾನ್ ಸ್ಟೀಫನ್ಸ್ ಈಗಾಗಲೇ ಅಂತಿಮ-8ರ ಘಟ್ಟ ತಲುಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News