‘ಭಯೋತ್ಪಾದಕರು’ ನಡೆಸುತ್ತಿರುವ ಭಾರೀ ‘ಅಪಪ್ರಚಾರ’: ಮ್ಯಾನ್ಮಾರ್ ನಾಯಕಿ ಸೂ ಕಿ ಆರೋಪ
ಢಾಕಾ (ಬಾಂಗ್ಲಾದೇಶ), ಸೆ. 6: ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿ ಮಾಡಲಾಗುತ್ತಿರುವ ‘ಬೃಹತ್ ಅಪಪ್ರಚಾರ’ಕ್ಕೆ ‘ಭಯೋತ್ಪಾದಕರು’ ಕಾರಣ ಎಂದು ದೇಶದ ನಾಯಕಿ ಆಂಗ್ ಸಾನ್ ಸೂ ಕಿ ಬುಧವಾರ ಆರೋಪಿಸಿದ್ದಾರೆ. ಆದರೆ, ಆಗಸ್ಟ್ 25ರ ಬಳಿಕ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಸುಮಾರು 1.25 ಲಕ್ಷ ರೊಹಿಂಗ್ಯ ಮುಸ್ಲಿಮರ ಬಗ್ಗೆ ಅವರು ಯಾವುದೇ ಪ್ರಸ್ತಾಪ ಮಾಡಿಲ್ಲ.
ಬೌದ್ಧ ಬಾಹುಳ್ಯದ ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಆಕ್ರಮಣಗಳ ಬಗ್ಗೆ ಮುಸ್ಲಿಮ್ ಜಗತ್ತಿನ ದೇಶಗಳು ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
‘ಜನಾಂಗೀಯ ಹತ್ಯೆಯನ್ನು ಎದುರಿಸುತ್ತಿರುವ ಮ್ಯಾನ್ಮಾರ್‌ನ ಸುಮಾರು 11 ಲಕ್ಷ ನಿರಾಶ್ರಿತರನ್ನು ರಕ್ಷಿಸಲು ಏನಾದರೂ ಮಾಡಬೇಕು’ ಎಂಬುದಾಗಿ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ವಿಶ್ವ ನಾಯಕರನ್ನು ಒತ್ತಾಯಿಸಿದ್ದಾರೆ.
ಆ ಬಳಿಕ, ಸೂ ಕಿ ಮಂಗಳವಾರ ಎರ್ದೊಗಾನ್‌ರೊಂದಿಗೆ ಟೆಲಿಫೋನ್‌ನಲ್ಲಿ ಮಾತನಾಡಿದರು.
‘‘ರಖೈನ್‌ನಲ್ಲಿರುವ ಎಲ್ಲರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಸರಕಾರ ಈಗಾಗಲೇ ತೆಗೆದುಕೊಂಡಿದೆ’’ ಎಂದು ಹೇಳಿಕೆಯೊಂದರಲ್ಲಿ ಸೂ ಕಿ ಹೇಳಿದರು. ಅವರ ಹೇಳಿಕೆಯನ್ನು ಅವರ ಕಚೇರಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದೆ.
ಅದೇ ವೇಳೆ, ಇತರ ದೇಶಗಳೊಂದಿಗಿನ ಸಂಬಂಧಗಳನ್ನು ಹಾಳುಗೆಡವಬಲ್ಲ ಅಪಪ್ರಚಾರ ನಡೆಸದಂತೆಯೂ ಅವರು ಎಚ್ಚರಿಕೆ ನೀಡಿದ್ದಾರೆ.
ಆಗಸ್ಟ್ 25ರಂದು ರೊಹಿಂಗ್ಯ ಬಂಡುಕೋರರು ಪೊಲೀಸ್ ಠಾಣೆಗಳ ಮೇಲೆ ಸಂಘಟಿತ ದಾಳಿ ನಡೆಸಿದ ಬಳಿಕ ಪ್ರಸಕ್ತ ಹಿಂಸಾಚಾರ ಆರಂಭಗೊಂಡಿದೆ ಎಂದು ಮ್ಯಾನ್ಮಾರ್ ಸರಕಾರ ಹೇಳಿದೆ.
ಬಳಿಕ ನಡೆದ ಸೇನಾ ದಮನ ಕಾರ್ಯಾಚರಣೆಯಲ್ಲಿ ಕನಿಷ್ಠ 400 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಸುಮಾರು 1.25 ಲಕ್ಷ ರೊಹಿಂಗ್ಯ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
ಮ್ಯಾನ್ಮಾರ್‌ನಿಂದ ಗಡಿಯಲ್ಲಿ ನೆಲಬಾಂಬ್ ?
ಬಾಂಗ್ಲಾದೇಶದೊಂದಿಗಿನ ಗಡಿಯ ಒಂದು ಭಾಗದಲ್ಲಿ ಮ್ಯಾನ್ಮಾರ್ ಕಳೆದ ಮೂರು ದಿನಗಳಿಂದ ನೆಲಬಾಂಬ್‌ಗಳನ್ನು ಇಡುತ್ತಿದೆ ಎಂದು ಬಾಂಗ್ಲಾದೇಶ ಸರಕಾರದ ಮೂಲಗಳು ಢಾಕಾದಲ್ಲಿ ಹೇಳಿವೆ.
ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಪಾರಾಗುವುದಕ್ಕಾಗಿ ಬಾಂಗ್ಲಾದೇಶಕ್ಕೆ ಪರಾರಿಯಾಗಿರುವ ರೊಹಿಂಗ್ಯ ಮುಸ್ಲಿಮರು ಸ್ವದೇಶಕ್ಕೆ ಹಿಂದಿರುಗುವುದನ್ನು ತಡೆಯುವುದು ಇದರ ಉದ್ದೇಶವಾಗಿರಬಹುದು ಎಂದು ಅವು ಅಭಿಪ್ರಾಯಪಟ್ಟಿವೆ.
ಗಡಿಯ ಇಷ್ಟು ಸಮೀಪದಲ್ಲಿ ನೆಲಬಾಂಬ್‌ಗಳನ್ನು ಹುದುಗಿಸಿಡುವುದರ ವಿರುದ್ಧ ಪ್ರತಿಭಟನೆ ಸಲ್ಲಿಸಲು ಬಾಂಗ್ಲಾದೇಶ ನಿರ್ಧರಿಸಿದೆ.
‘‘ಗಡಿಯಲ್ಲಿ ಇರುವ ತಂತಿ ಬೇಲಿಯುದ್ದಕ್ಕೂ ಅವರ ಜಮೀನಿನಲ್ಲಿ ನೆಲಬಾಂಬ್‌ಗಳನ್ನು ಇಡುತ್ತಿದ್ದಾರೆ’’ ಎಂದು ಒಂದು ಮೂಲ ಹೇಳಿದೆ. ಚಿತ್ರಗಳು ಮತ್ತು ಮಾಹಿತಿದಾರರ ಮೂಲಕ ಈ ವಿಷಯ ಬಾಂಗ್ಲಾದೇಶಕ್ಕೆ ತಿಳಿದಿದೆ ಎಂದು ಇನ್ನೊಂದು ಮೂಲ ತಿಳಿಸಿದೆ.
ಮಂಗಳವಾರ ಗಡಿ ದಾಟುವಾಗ ನಡೆದ ಸ್ಫೋಟದಲ್ಲಿ ಓರ್ವ ಬಾಲಕನ ಕಾಲು ಛಿದ್ರವಾಗಿದ್ದು, ಚಿಕಿತ್ಸೆಗಾಗಿ ಬಾಂಗ್ಲಾದೇಶಕ್ಕೆ ಕರೆತರಲಾಗಿದೆ. ಇನ್ನೋರ್ವ ಬಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನೆಲಬಾಂಬ್ ಸ್ಫೋಟದಿಂದ ಹೀಗೆ ಆಗಿರಬಹುದು ಎಂದು ಬಾಂಗ್ಲಾ ಗಡಿ ಸೈನಿಕರು ಭಾವಿಸಿದ್ದಾರೆ.
ರೊಹಿಂಗ್ಯರಿಗೆ ಕಾನೂನು ಸ್ಥಾನಮಾನ ನೀಡಿ: ಮ್ಯಾನ್ಮಾರ್‌ಗೆ ವಿಶ್ವಸಂಸ್ಥೆ ಮುಖ್ಯಸ್ಥರಿಂದ ಒತ್ತಾಯ
ರಖೈನ್ ರಾಜ್ಯದಲ್ಲಿ ನೆಲೆಸಿರುವ ಮುಸ್ಲಿಮರಿಗೆ ಒಂದೋ ರಾಷ್ಟ್ರೀಯತೆ ಅಥವಾ ಕಾನೂನು ಸ್ಥಾನಮಾನ ಕೊಡಿ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಮ್ಯಾನ್ಮಾರ್ ಸರಕಾರಕ್ಕೆ ಕರೆ ನೀಡಿದ್ದಾರೆ.
ಅದೇ ವೇಳೆ, ಸುಮಾರು 10 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ನಿಂದ ಸುಮಾರು 1.25 ಲಕ್ಷ ರೊಹಿಂಗ್ಯ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ನೆಲೆಸಿರುವ ಭದ್ರತೆ, ಮಾನವ ಬಿಕ್ಕಟ್ಟು ಮತ್ತು ಮಾನವಹಕ್ಕುಗಳ ಪರಿಸ್ಥಿತಿ ಬಗ್ಗೆ ತಾನು ‘ಗಂಭೀರ ಕಳವಳ’ಗೊಂಡಿರುವುದಾಗಿ ವಿಶ್ವಸಂಸ್ಥೆಯ ಮುಖ್ಯಸ್ಥರು ಹೇಳಿದರು.