ಮ್ಯಾನ್ಮಾರ್ ಜೊತೆಗೆ ಭಾರತವಿದೆ
ನೇಪಿಟಾವ್ (ಮ್ಯಾನ್ಮಾರ್), ಸೆ. 6: ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ನಡೆಯುತ್ತಿರುವ ‘ತೀವ್ರವಾದಿ ಹಿಂಸೆ’ ಮತ್ತು ‘ಭದ್ರತಾ ಪಡೆಗಳ ವಿರುದ್ಧ ನಡೆಯುತ್ತಿರುವ ಹಿಂಸೆ’ಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ, ಆ ದೇಶದಲ್ಲಿ ರೊಹಿಂಗ್ಯ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಹಿಂಸೆಯನ್ನು ಪ್ರಸ್ತಾಪಿಸಿರುವುದರಿಂದ ಹಿಂದೆ ಸರಿದಿದ್ದಾರೆ.
ದೇಶದ ಅಲ್ಪಸಂಖ್ಯಾತ ರೊಹಿಂಗ್ಯ ಮುಸ್ಲಿಮರ ವಿರುದ್ಧ ನಡೆಯುತ್ತಿದೆಯೆನ್ನಲಾದ ಸರಕಾರಿ ಪ್ರಾಯೋಜಿತ ಹಿಂಸಾಚಾರಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದಿಂದ ತೀವ್ರ ಟೀಕೆಗೆ ಗುರಿಯಾಗಿರುವ ನಾಯಕಿ ಆಂಗ್ ಸಾನ್ ಸೂ ಕಿಯ ‘ನಾಯಕತ್ವ’ವನ್ನು ಮೋದಿ ಇದೇ ಸಂದರ್ಭದಲ್ಲಿ ಪ್ರಶಂಸಿಸಿದರು.
‘‘ರಖೈನ್ ರಾಜ್ಯದಲ್ಲಿ ನಡೆಯುತ್ತಿರುವ ತೀವ್ರವಾದಿ ಹಿಂಸಾಚಾರ ಮತ್ತು ಭದ್ರತಾ ಪಡೆಗಳ ವಿರುದ್ಧದ ಹಿಂಸಾಚಾರ ಹಾಗೂ ಇದು ಅಮಾಯಕ ಜನರ ಮೇಲೆ ಬೀರಿರುವ ಪರಿಣಾಮದಿಂದ ನಿಮ್ಮಲ್ಲಿ ಉಂಟಾಗಿರುವ ಆತಂಕಕ್ಕೆ ನಮ್ಮ ಸಹಾನುಭೂತಿ ಇದೆ’’ ಎಂದು ರಾಜಧಾನಿ ನೇಪಿಟಾವ್‌ನಲ್ಲಿ ಸೂ ಕಿ ಜೊತೆಗೆ ನೀಡಲಾದ ಜಂಟಿ ಹೇಳಿಕೆಯಲ್ಲಿ ಮೋದಿ ಹೇಳಿದರು.
‘‘ವಿವಾದಕ್ಕೆ ಸಂಬಂಧಪಟ್ಟ ಎಲ್ಲರೂ ಜೊತೆಗೂಡಿ ಪರಿಹಾರವೊಂದನ್ನು ಕಂಡುಹಿಡಿಯಬಹುದಾಗಿದೆ ಹಾಗೂ ಆ ಮೂಲಕ ಮ್ಯಾನ್ಮಾರ್‌ನ ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬಹುದಾಗಿದೆ’’ ಎಂದರು. ‘‘ಎಲ್ಲರಿಗೂ ಶಾಂತಿ, ನ್ಯಾಯ, ಘನತೆ ಮತ್ತು ಪ್ರಜಾಸತ್ತಾತ್ಮಕ ವೌಲ್ಯಗಳು ತಲುಪುವಂತೆ ನೋಡಿಕೊಳ್ಳಬಹುದಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.
ತನ್ನ ದೇಶ ಎದುರಿಸುತ್ತಿರುವ ‘ಭಯೋತ್ಪಾದನೆ ಬೆದರಿಕೆ’ಯ ಬಗ್ಗೆ ದೃಢವಾದ ನಿಲುವೊಂದನ್ನು ತೆಗೆದುಕೊಂಡಿರುವುದಕ್ಕಾಗಿ ಸೂ ಕಿ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದರು.
ಎರಡು ದಿನಗಳ ಭೇಟಿಗಾಗಿ ಮೋದಿ ಮ್ಯಾನ್ಮಾರ್‌ನಲ್ಲಿದ್ದಾರೆ.