ದ್ವೇಷದ ವಾತಾವರಣಕ್ಕೆ ಗೌರಿ ಲಂಕೇಶ್ ಬಲಿ: ಜಿ.ರಾಜಶೇಖರ್

Update: 2017-09-06 15:38 GMT

ಉಡುಪಿ, ಸೆ.6: ತಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳದವರಿಗೆ ಈ ಭೂಮಿಯಲ್ಲಿ ಇರಲು ಬಿಡಲ್ಲ ಎಂಬ ಮನೋಧರ್ಮ, ಸಂಸ್ಕೃತಿ, ಧ್ವೇಷದ ವಾತಾವರಣಕ್ಕೆ ಗೌರಿ ಲಂಕೇಶ್ ಬಲಿಯಾಗಿದ್ದಾರೆ ಎಂದು ಹಿರಿಯ ಚಿಂತಕ ಜಿ. ರಾಜಶೇಖರ್ ಟೀಕಿಸಿದ್ದಾರೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ವಿರೋಧಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿ ಕೊಳ್ಳಲಾದ ಪ್ರತಿಭಟನೆ ಹಾಗೂ ಸಂಸ್ಮರಣಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಗೌರಿ ಲಂಕೇಶ್ ದ್ವೇಷ ಹಾಗೂ ಹಿಂಸೆಯ ಶಕ್ತಿಯನ್ನು ಎದುರು ಹಾಕಿಕೊಂಡು ತನ್ನ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಈಗ ಗೌರಿಯ ಸಾವಿನಿಂದ ಅವರಿಗೆ ಸಂತೋಷ ಆಗಿದೆ. ವೈರಿಯ ಸಾವನ್ನು ದುಃಖಿಸುವ ಸಂಸ್ಕೃತಿ ಈಗ ನಮ್ಮ ದೇಶದಲ್ಲಿ ಉಳಿದಿಲ್ಲ. ಮಹಾತ್ಮ ಗಾಂಧಿಯ ಕೊಲೆಯನ್ನೇ ಸಿಹಿ ವಿತರಿಸಿ ಸಂಭ್ರ ಮಿಸಿದವರು ಇಂದು ನಮ್ಮ ದೇಶವನ್ನು ಆಳುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧೀಜಿ ಕೊಲೆ, ಅನಂತಮೂರ್ತಿಯ ಸಾವನ್ನು ಸಂಭ್ರಮಿಸಿದವರಿಗೆ ದಿಕ್ಕಾರ ಕೂಗುವುದು ಮತ್ತು ಅವರ ರಾಜಕೀಯವನ್ನು ವಿರೋಧಿಸುವುದೇ ಗೌರಿ ಲಂಕೇಶ್‌ರ ಸಾವನ್ನು ಖಂಡಿಸುವ ವಿಧಾನವಾಗಿದೆ. ಇದು ನಮ್ಮ ಸಂಕಲ್ಪ ಆಗಬೇಕು. ಈ ಹೊಸ ಪ್ರತಿಜ್ಞೆಯೊಂದಿಗೆ ಗೌರಿ ಲಂಕೇಶ್‌ರ ನೆನಪನ್ನು ಸ್ಥಿತಸ್ಥಾಯಿಯನ್ನಾಗಿಸಬೇಕಾಗಿದೆ. ಗೌರಿ ಲಂಕೇಶ್‌ರ ಮೌಲ್ಯ, ಸಮಾನತೆ, ಪ್ರಜಾಪ್ರಭುತ್ವ, ಭಾತೃತ್ವ ಪರವಾದ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವುದೇ ಗೌರಿ ಲಂಕೇಶ್ ಅವರಿಗೆ ಸಲ್ಲಿಸುವ ನಿಜವಾದ ಶೃದ್ಧಾಂಜಲಿಯಾಗಿದೆ ಎಂದರು.

ವೇದಿಕೆಯ ಉಪಾಧ್ಯಕ್ಷ ಪ್ರೊ.ಕೆ.ಫಣಿರಾಜ್ ಮಾತನಾಡಿ, ಅಪಪ್ರಚಾರದ ಮೂಲಕ ಗೌರಿ ಲಂಕೇಶ್ ಅವರ ಕೊಲೆಯನ್ನು ದಾರಿ ತಪ್ಪಿಸುವ ಕೆಲಸ ಮಾಡ ಬಾರದು. ಇದು ಅವರು ಎತ್ತಿ ಹಿಡಿಯುತ್ತಿರುವ ವಿಚಾರಗಳಿಗೆ ಆದ ಕೊಲೆಯೇ ಹೊರತು ನಕ್ಸಲರು, ಆಸ್ತಿಗಾಗಿ, ವೈರಿಗಳಿಂದ ಆದ ಕೊಲೆಯಲ್ಲ. ನಾವು ಆ ದಿಕ್ಕಿನಲ್ಲಿ ಯೋಚನೆ ಮಾಡಬೇಕು. ಈ ಕೊಲೆಯನ್ನು ಕೇವಲ ಅಪರಾಧದ ದೃಷ್ಠಿಕೋನದಲ್ಲಿ ನೋಡದೆ ಭಯೋತ್ಪಾದಕ ಕೃತ್ಯ ಎಂಬುದಾಗಿ ಪರಿಗಣಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ತನಿಖೆಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರ ಬಂದ ನಂತರ ಇಂತಹ ಕೊಲೆಗಳು ದೇಶದೆಲ್ಲೆಡೆ ಹೆಚ್ಚಾಗುತ್ತಿವೆ. ಗೌರಿಯವರ ಸಿದ್ಧಾಂತವನ್ನು ಎದುರಿಸಲು ಸಾಧ್ಯವಾಗದವರು ಈ ಕೊಲೆ ಮಾಡಿದ್ದಾರೆ. ಆದರೆ ಅವರ ಚಿಂತನೆ ಇನ್ನೂ ಉಳಿಯುತ್ತದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಜಮಾಅತೆ ಇಸ್ಲಾಮೀ ಹಿಂದ್‌ನ ಮುಖಂಡರಾದ ಅಕ್ಬರ್ ಅಲಿ ಮಾತನಾಡಿ, ಇದು ಗೌರಿ ಲಂಕೇಶ್ ಅವರ ಹತ್ಯೆ ಅಲ್ಲ, ವಿಚಾರ ಮತ್ತು ತರ್ಕದ ಹತ್ಯೆಯಾಗಿದೆ. ಈ ಕೊಲೆ ವಿಚಾರಧಾರೆಗೆ ಎಸೆದ ಸವಾಲು ಆಗಿದೆ ಎಂದು ಹೇಳಿದರು.

ಮನೋ ವೈದ್ಯ ಡಾ.ಪಿ.ವಿ.ಭಂಡಾರಿ, ದಲಿತ ಚಿಂತಕ ಜಯನ್ ಮಲ್ಪೆ, ಉಪನ್ಯಾಸಕ ಪ್ರೊ.ಹಯವದನ ಮೂಡಸಗ್ರಿ, ಪಿಎಫ್‌ಐಯ ಆಲಂ ಬ್ರಹ್ಮಾವರ, ಸಿಪಿಎಂನ ವಿಶ್ವನಾಥ ರೈ, ದಲಿತ ದಮನಿತರ ಹೋರಾಟ ಸಮಿತಿಯ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಹರ್ಷಕುಮಾರ್ ಕುಗ್ವೆ ಮಾತನಾಡಿದರು. ಸಭೆಯಲ್ಲಿ ಕ್ಯಾಂಡಲ್ ದೀಪಬೆಳಗಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಹುಸೇನ್ ಕೋಡಿಬೆಂಗ್ರೆ, ಎಸ್.ಎಸ್.ಪ್ರಸಾದ್, ಅದಮಾರು ಶ್ರೀಪತಿ ಆಚಾರ್ಯ, ಅಬ್ದುಲ್ ರಶೀದ್ ಖತೀಬ್, ಪ್ರೊ.ಸಿರಿಲ್ ಮಥಾಯಸ್, ಸಂವರ್ತ್ ಸಾಹಿಲ್, ಕವಿರಾಜ್, ರಾಜರಾಮ್ ತಲ್ಲೂರು, ಉದ್ಯಾವರ ನಾಗೇಶ್ ಕುಮಾರ್, ಯು.ಗುರುದತ್, ಸಲೀಂ ಕೊಡಂಕೂರು, ಇದ್ರೀಸ್ ಹೂಡೆ ಮೊದಲಾದವರು ಉಪಸ್ಥಿತರಿದ್ದರು.

ಸಾಲ ಮಾಡಿ ಪತ್ರಿಕೆ ನಡೆಸುತ್ತಿದ್ದರು!

‘ನಾನು ಕಳೆದ 17 ವರ್ಷಗಳಿಂದ ಗೌರಿ ಲಂಕೇಶ್ ಹಾಗೂ ಅವರ ಪತ್ರಿಕೆಯ ಭಾಗವಾಗಿದ್ದೇನೆ. ಪತ್ರಿಕೆಯ ನೋವು ಸಂತೋಷಗಳನ್ನು ನನ್ನ ಜೊತೆ ಅವರು ಹಂಚಿಕೊಂಡಿದ್ದಾರೆ. ಪತ್ರಿಕೆ ಕಳೆದ ಮೂರು ವರ್ಷಗಳಿಂದ ನಷ್ಟದಲ್ಲಿ ನಡೆಯುತ್ತಿತ್ತು. ಮೂರೇ ಜನ ಕೆಲಸದವರು ಇದ್ದರು. ಡಿಟಿಪಿಯನ್ನು ಗೌರಿ ಅವರೇ ರಾತ್ರಿ ಕುಳಿತು ಮಾಡುತ್ತಿದ್ದರು. ಜಿ.ರಾಜಶೇಖರ್ ಕೈಯಲ್ಲಿ ಬರೆದು ಕಳುಹಿಸುತ್ತಿದ್ದ ಲೇಖನಗಳನ್ನು ಗೌರಿ ಅವರೇ ಟೈಪ್ ಮಾಡುತ್ತಿದ್ದರು. ಅದನ್ನು ನೋಡಲಾರದೆ ಜಿ.ರಾಜಶೇಖರ್ ನಂತರ ಟೈಪ್ ಮಾಡುವುದನ್ನು ಕಲಿತರು’.

 ‘ನೋಟು ರದ್ಧತಿಯ ಬಳಿಕ ಗೌರಿ ಅವರ ಕೈಕಟ್ಟಿ ಹೋಗಿತ್ತು. ಸಾಲ ಮಾಡಿ ಮೂರು ತಿಂಗಳು ಪತ್ರಿಕೆಯನ್ನು ಹೊರ ತಂದರು. ಆ ಕಾರಣಕ್ಕಾಗಿ ನಾನು, ಜಿ. ರಾಜಶೇಖರ್, ರಹಮತ್ ತರಿಕೆರೆ, ವಿ.ಎಸ್.ಶ್ರೀಧರ್ ಸೇರಿ ಒಂದು ತಿಂಗಳ ಹಿಂದೆ ಜಾಹೀರಾತು ಇಲ್ಲದ ಈ ಪತ್ರಿಕೆಗೆ ಸಹಾಯ ಮಾಡುವಂತೆ ಪತ್ರಿಕೆಯ ಬೆಂಬಲಿಗರಿಗೆ ಹಿತೈಷಿಗಳಿಗೆ ಮನವಿ ಮಾಡಿದ್ದೇವು. ಗೌರಿ ತನ್ನ ಪತ್ರಿಕೆಗಾಗಿ ಹಣವನ್ನೆಲ್ಲ ಕಳೆದುಕೊಂಡರು. ಪತ್ರಿಕೆಯನ್ನು ಮುಚ್ಚುವ ಕುರಿತು ಕೆಲ ಸಮಯಗಳ ಹಿಂದೆ ಬೆಂಗಳೂರಿನಲ್ಲಿ ಸಭೆಯನ್ನು ಕರೆದಿದ್ದರು. ಆ ಸಭೆಯಲ್ಲಿ ಪತ್ರಿಕೆಯನ್ನು ಎರಡು ವರ್ಷಗಳ ಕಾಲ ಮುಂದುವರೆಸಿಕೊಂಡು ಹೋಗಬೇಕೆಂದು ವ್ಯಕ್ತವಾದ ಒತ್ತಾಯದ ಸ್ಥಿತಿಯಲ್ಲಿ ಇಲ್ಲಿವರೆಗೆ ಬಂದಿದೆ. ಅವರಿಗೆ ತಂದೆ ಬಿಟ್ಟು ಹೋದ ಯಾವುದೇ ಆಸ್ತಿ ಇರಲಿಲ್ಲ.’ ಎಂದು ಪ್ರೊ.ಕೆ.ಫಣಿರಾಜ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News