×
Ad

ವಲಸಿಗರ ರಕ್ಷಣೆ ಹೊಣೆಯನ್ನು ಕಾಂಗ್ರೆಸ್‌ಗೆ ವಹಿಸಿದ ಟ್ರಂಪ್

Update: 2017-09-06 20:21 IST

ವಾಶಿಂಗ್ಟನ್, ಸೆ. 6: ಅಮೆರಿಕಕ್ಕೆ ಎಳೆಯ ಪ್ರಾಯದಲ್ಲಿ ವಲಸೆ ಬಂದು ನೋಂದಣಿಯಾಗದಿರುವ ವಲಸಿಗರನ್ನು ಗಡಿಪಾರಿನಿಂದ ರಕ್ಷಿಸುವ ‘ಡೆಫರ್‌ಡ್ ಆ್ಯಕ್ಷನ್ ಫಾರ್ ಚೈಲ್ಡ್‌ಹುಡ್ ಅರೈವಲ್ಸ್ (ಡಿಎಸಿಎ)’ ಕಾನೂನನ್ನು ರದ್ದುಪಡಿಸಿರುವ ಟ್ರಂಪ್ ಆಡಳಿತ ಈಗ ಮೊಸಳೆ ಕಣ್ಣೀರು ಸುರಿಸುತ್ತಿದೆ.

ತಾನು ವಲಸಿಗರ ಪರವಾಗಿ ಇದ್ದೇನೆ ಎಂದು ಹೇಳಿಕೊಂಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರನ್ನು ರಕ್ಷಿಸುವ ಜವಾಬ್ದಾರಿಯನ್ನು ಸಂಸತ್ತು ಕಾಂಗ್ರೆಸ್‌ಗೆ ವಹಿಸಿದ್ದಾರೆ.

‘‘ಈ ಜನರ ಬಗ್ಗೆ ನನಗೆ ಪ್ರೀತಿಯಿದೆ. ಬಹುಶಃ ಅವರಿಗೆ ಕಾಂಗ್ರೆಸ್ ಸಹಾಯ ಮಾಡಬಲ್ಲದು ಹಾಗೂ ಸಹಾಯವನ್ನು ಸರಿಯಾದ ರೀತಿಯಲ್ಲಿ ಮಾಡಬಲ್ಲದು’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

 ಹಿಂದಿನ ಬರಾಕ್ ಒಬಾಮ ಆಡಳಿತ 2012ರಲ್ಲಿ ವಲಸಿಗರಿಗೆ ನೀಡಿದ್ದ ರಕ್ಷಣೆಯನ್ನು ಟ್ರಂಪ್ ಆಡಳಿತ ಮಂಗಳವಾರ ಹಿಂದಕ್ಕೆ ಪಡೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.

 ಅಂದು ಈ ಕಾನೂನನ್ನು ಸಮರ್ಥಿಸಿದ್ದ ಒಬಾಮ, ‘‘ಈ ಯುವಕರಿಗೆ ಕಷ್ಟ ಕೊಡುವುದು ತಪ್ಪು. ಅವರು ತಪ್ಪು ಮಾಡಿಲ್ಲ. ಅವರು ಹೊಸ ಉದ್ಯಮ ನಡೆಸಲು, ನಮ್ಮ ಲ್ಯಾಬ್‌ಗಳಲ್ಲಿ ಕೆಲಸ ಮಾಡಲು, ನಮ್ಮ ಸೇನೆಯಲ್ಲಿ ಸೇವೆ ಸಲ್ಲಿಸಲು ಹಾಗೂ ನಾವು ಪ್ರೀತಿಸುವ ನಮ್ಮ ದೇಶಕ್ಕೆ ದೇಣಿಗೆ ನೀಡಲು ಬಯಸಿದ್ದಾರೆ’’ ಎಂದು ಹೇಳಿದ್ದರು.

‘‘ಅವರನ್ನು ಗಡಿಪಾರಿಗೆ ಒಡ್ಡುವುದು ಕ್ರೌರ್ಯವೂ ಆಗುತ್ತದೆ’’ ಎಂದಿದ್ದರು.

ಈ ಕಾನೂನಿನ ಅನ್ವಯ ಐದು ವರ್ಷಗಳ ಅವಧಿಯಲ್ಲಿ ಸುಮಾರು 8 ಲಕ್ಷ ಮಂದಿ ಗಡಿಪಾರಿನಿಂದ ರಕ್ಷಣೆ ಪಡೆದಿದ್ದಾರೆ. ಈ ಪೈಕಿ ಸುಮಾರು 8,000 ಮಂದಿದ ಭಾರತೀಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News