×
Ad

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸಮಾನ ಮನಸ್ಕ ಸಂಘಟನೆಯಿಂದ ಪ್ರತಿಭಟನೆ

Update: 2017-09-06 20:28 IST

ಮಂಗಳೂರು, ಸೆ. 1: ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಬುಧವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಆವರಣ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಲೇಖಕಿ ಚಂದ್ರಕಲಾ ನಂದಾವರ ಪ್ರಗತಿಪರರನ್ನು ಗುರಿಯಾಗಿಸಿ ಹತ್ಯೆ ಮಾಡುವ ಸಂಸ್ಕೃತಿ ಕೊನೆಗೊಳ್ಳಬೇಕು. ಓರ್ವ ಮಹಿಳಾ ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ತೀರಾ ಖಂಡನೀಯ. ವಿಚಾರವಾದಿಗಳು, ಬುದ್ಧಿಜೀವಿಗಳನ್ನು ಗುರಿಯಾಗಿಸಿ ಹತ್ಯೆಗೈಯು ಸಂಸ್ಕೃತಿ ಕೊನೆಗೊಳ್ಳಬೇಕು. ಸಂಸ್ಕೃತಿಯ ಹೆಸರಿನಲ್ಲಿ ಕೊಲ್ಲುವ ಪರಂಪರೆಯನ್ನು ಮುಂದುವರಿದಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ದೇಶದಲ್ಲಿ ವಿಚಾರವಾದಿಗಳು, ಬುದ್ಧಿಜೀವಿಗಳನ್ನು ಗುರಿಯಾಗಿಸಿ ಹತ್ಯೆ ಮಾಡುವ ದುಷ್ಟ ಶಕ್ತಿಗಳನ್ನು ಪತ್ತೆ ಹಚ್ಚುವಂತಾಗಬೇಕು. ದುಷ್ಕ ಶಕ್ತಿಗಳ ಗುಂಡೇಟಿಗೆ ಗೌರಿ ಲಂಕೇಶ್ ಅವರು ಬಲಿಯಾಗಿದ್ದಾರೆ. ದುಷ್ಕರ್ಮಿಗಳಿಗೆ ತಾವು ಏನು ಮಾಡಿದರೂ ನಡೆಯುತ್ತದೆ ಎಂಬಂತಾಗಿದೆ. ಈ ಹಿಂದೆ ಕಲ್ಬುರ್ಗಿಯವರನ್ನು ಹತ್ಯೆ ಮಾಡಿದ ದುಷ್ಕ ಶಕ್ತಿಗಳೇ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಿದೆ ಎಂದು ಆರೋಪಿಸಿದರು.

 ಡಿಎಸ್‌ಎಸ್ ಹಿರಿಯ ಮುಖಂಡ ಎಂ.ದೇವದಾಸ್ ಮಾತನಾಡಿ, ಅನ್ಯಾಯದ ವಿರುದ್ಧ ಧ್ವನಿ ಎತ್ತುವವರು ಇಂದು ಅಪಾಯವನ್ನು ಎದುರಿಸುವಂತಾಗಿದೆ. ಈ ಹಿಂದೆ ಕಲ್ಬುರ್ಗಿಯವರೂ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿದ್ದರು. ಆದರೆ ನೈಜ ಆರೋಪಿಗಳ ಬಂಧನ ಈವರೆಗೂ ಆಗಿಲ್ಲ. ಗೌರಿ ಲಂಕೇಶ್ ಅವರ ಹತ್ಯಾ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಬಂಧಿಸುವಂತಾಗಬೇಕು ಎಂದು ಅವರು ಆಗ್ರಹಿಸಿದರು.

 ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡ ವಸಂತ ಆಚಾರಿ, ಸುನಿಲ್‌ಕುಮಾರ್ ಬಜಾಲ್, ಸಿಪಿಐ ಮುಖಂಡರಾದ ವಿ.ಕುಕ್ಯಾನ್, ಕರುಣಾಕರ, ಹಿರಿಯ ನ್ಯಾಯವಾದಿ ದಯಾನಾಥ ಕೋಟ್ಯಾನ್,ಕೋ.ಸೌ.ವೇ.ಯ ಸುರೇಶ್ ಭಟ್ ಬಾಕ್ರಬೈಲ್, ಜೆಎಂಎಸ್‌ನ ಪದ್ಮಾವತಿ ಶೆಟ್ಟಿ, ಭಾರತಿ ಬೋಳಾರ,ಪ್ರಗತಿಪರರಾದ ಚಂದ್ರಹಾಸ ಉಳ್ಳಾಲ, ಜ್ಯೋತಿ ಚೇಳ್ಯಾರ್, ಐವನ್ ಡಿಸಿಲ್ವ, ಮೊದಲಾದವರು ಉಪಸ್ಥಿತರಿದ್ದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News