×
Ad

ಕಲಾವಿದ ಪ್ರಕಾಶ್ ರೈಗೆ ‘ಕಾರಂತ ಹುಟ್ಟೂರ ಪ್ರಶಸ್ತಿ’

Update: 2017-09-06 20:51 IST

ಉಡುಪಿ, ಸೆ.6: ಕೋಟತಟ್ಟು ಗ್ರಾಪಂ ಕೋಟ, ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಕಳೆದ 12 ವರ್ಷಗಳಿಂದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುತ್ತಿರುವ ‘ಡಾ.ಕಾರಂತ ಹುಟ್ಟೂರ ಪ್ರಶಸ್ತಿ’ಗೆ ಈ ಬಾರಿ ಸೃಜನಶೀಲ ವ್ಯಕ್ತಿತ್ವದ ಕಲಾವಿದ ಹಾಗೂ ಬಹುಮುಖ ಪ್ರತಿಭೆಯ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಲಾಗಿದೆ.

ಬುಧವಾರ ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕೋಟದ ಡಾ. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಅವರು ಈ ವಿಷಯ ಪ್ರಕಟಿಸಿದರು.

ಪ್ರಕಾಶ್ ರೈ ಅವರು ರಂಗಕಲಾವಿದ, ಬಹುಭಾಷಾ ಚಲನಚಿತ್ರ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಜನಪ್ರಿಯತೆ ಗಳಿಸಿರುವುದಲ್ಲದೇ, ಸಾಂಸ್ಕೃತಿಕ- ಸಾಹಿತ್ಯಿಕ ಚಿಂತಕರಾಗಿರುವ ಹೆಸರು ಮಾಡಿದ್ದಾರೆ. 2017ನೇ ಸಾಲಿನ ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಾಶ್‌ರಾಜ್ ಅವರ ಹೆಸರನ್ನು ಆಯ್ಕೆ ಮಾಡಿದೆ ಎಂದವರು ತಿಳಿಸಿದರು.

ಬರುವ ಅ.10ರಂದು ಡಾ.ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ದಿನದಂದು ಕೋಟದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಕಾಶ್ ರೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದರು.

ಈ ಬಾರಿ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಅ.1ರಿಂದ 10ರವರೆಗೆ ಹತ್ತು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸುಗ್ಗಿ ‘ತಂಬೆಲರು-2017’ನ್ನು ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿವಿಧ ಸಮ್ಮೇಳನ, ನಾಟಕ, ಆರೋಗ್ಯ ಮೇಳ, ಶತಕವಿ ಸಮ್ಮೇಳನ, ಚಿಣ್ಣರ ಹಬ್ಬ, ವಿಚಾರಗೋಷ್ಠಿ, ಚಲನಚಿತ್ರ ಪ್ರದರ್ಶನ, ತೆಂಕು-ಬಡಗಿನ ಯಕ್ಷ-ಗಾನ-ನೃತ್ಯ ವೈಭವ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಆನಂದ ಕುಂದರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ಎಚ್.ಪ್ರಮೋದ ಹಂದೆ, ಪ್ರತಿಷ್ಠಾನದ ಮಾಧ್ಯಮ ವಕ್ತಾರ ಅಶ್ವಥ್ ಆಚಾರ್ಯ, ಆಯ್ಕೆ ಸಮಿತಿ ಸದಸ್ಯ ಯು.ಎಸ್.ಶೆಣೈ ಹಾಗೂ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾರ್ಯ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News