×
Ad

ಗೌರಿ ಲಂಕೇಶ್, ನಿಡುಮಾಮಿಡಿ ಸ್ವಾಮೀಜಿಯ ಫ್ಲೆಕ್ಸ್, ಬ್ಯಾನರ್‌ಗೆ ಹಾನಿ

Update: 2017-09-07 17:25 IST

ಮಂಗಳೂರು, ಸೆ.7: ಪೊಲೀಸರ ನಿಷೇಧದ ನಡುವೆಯೂ ‘ಮಂಗಳೂರು ಚಲೋ’ ನಡೆಸಿದ ಬಿಜೆಪಿ, ಸಂಘಪರಿವಾರದ ಕಾರ್ಯಕರ್ತರು ನಗರದ ಹಂಪನಕಟ್ಟೆಯ ಮುಖ್ಯ ರಸ್ತೆಯ ಹಲವು ಕಡೆ ಪತ್ರಕರ್ತೆ ಗೌರಿ ಲಂಕೇಶ್ ಹಾಗು ನಿಡುಮಾಮಿಡಿ ಸ್ವಾಮೀಜಿಗೆ ಸಂಬಂಧಿಸಿ ಹಾಕಲಾದ ಹಲವು ಬ್ಯಾನರ್‌ಗಳಿಗೆ ಗುರುವಾರ ಹಾನಿಗೈದಿದ್ದಾರೆ.

ನಗರದ ಪುರಭವನ, ಮಿನಿವಿಧಾನಸೌಧ, ತಾಪಂ ಕಚೇರಿ ಬಳಿ ಮಂಗಳೂರು ನಾಗರಿಕರ ಪರವಾಗಿ ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್‌ಗೆ ಶ್ರದ್ಧಾಂಜಲಿ ಹಾಗೂ ಮಂಗಳೂರಿನಲ್ಲಿ ನಡೆಯುವ ಡಿವೈಎಫ್‌ಐ ಜಿಲ್ಲಾ ಸಮ್ಮೇಳನಕ್ಕೆ ಆಗಮಿಸಲಿರುವ ನಿಡುಮಾಮಿಡಿ ಸ್ವಾಮೀಜಿಗೆ ಸ್ವಾಗತ ಕೋರಿ ಫ್ಲೆಕ್ಸ್, ಬ್ಯಾನರ್ ಹಾಕಲಾಗಿತ್ತು.

ನಿಡುಮಾಮಿಡಿ ಸ್ವಾಮೀಜಿಗೆ ಸ್ವಾಗತ ಕೋರಿದ ಬ್ಯಾನರನ್ನು ಮೊನ್ನೆಯೇ ದುಷ್ಕರ್ಮಿಗಳು ಹರಿದು ಹಾಕಿದ್ದರು. ಈ ಬಗ್ಗೆ ಡಿವೈಎಫ್‌ಐ ಮುಖಂಡರು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಮಧ್ಯೆ ಗುರುವಾರ ನಿಷೇಧದ ಹೊರತಾಗಿಯೂ ಮಂಗಳೂರು ಚಲೋ ನಡೆಸಿದ ಬಿಜೆಪಿ-ಸಂಘ ಪರಿವಾರದ ಕಾರ್ಯಕರ್ತರು ರಸ್ತೆಯುದ್ದಕ್ಕೂ ಹಾಕಲಾದ 20ಕ್ಕೂ ಅಧಿಕ ಬ್ಯಾನರ್ ಮತ್ತು 2 ಫ್ಲೆಕ್ಸ್‌ಗಳನ್ನು ಚಾಕು ಹಾಕಿ, ಬ್ಲೇಡ್‌ನಿಂದ ಗೀರಿ ಹಾನಿಗೈಯಲಾಗಿದೆ. ಅಷ್ಟೇ ಅಲ್ಲ, ಬ್ಯಾನರ್, ಫ್ಲೆಕ್ಸ್‌ಗಳನ್ನು ಚಿಂದಿ ಮಾಡಿ ನೆಲಕ್ಕೆ ಕೊಡವಿ ಹಾಕಲಾಗಿದೆ.

ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಮೊನ್ನೆ ನಿಡುಮಾಮಿಡಿ ಸ್ವಾಮೀಜಿಗೆ ಸ್ವಾಗತ ಕೋರಿ ಹಾಕಲಾಗಿದ್ದ ಬ್ಯಾನರ್‌ಗೆ ಹಾನಿಗೈಯಲಾಗಿತ್ತು. ಈ ಬಗ್ಗೆ ದೂರು ನೀಡಿದ್ದರೂ ಪೊಲೀಸರು ಕ್ರಮ ಜರಗಿಸಿಲ್ಲ. ಆ ಬಳಿಕ ನಿಡುಮಾಮಿಡಿ ಸ್ವಾಮೀಜಿಗೆ ಸ್ವಾಗತ ಕೋರಿ ಮತ್ತೆ ಅದೇ ಸ್ಥಳದಲ್ಲಿ ಬ್ಯಾನರ್ ಹಾಕಲಾಗಿತ್ತು. ಇಂದು ‘ಮಂಗಳೂರು ಚಲೋ’ ಹೆಸರಿನಲ್ಲಿ ಪಾದಯಾತ್ರೆ ನಡೆಸಿದ ಸಂಘ ಪರಿವಾರ ರಸ್ತೆಯುದ್ದಕ್ಕೂ ಗೌರಿ ಲಂಕೇಶ್‌ಗೆ ಶ್ರದ್ಧಾಂಜಲಿ ಹಾಗೂ ನಿಡುಮಾಮಿಡಿ ಸ್ವಾಮೀಜಿಗೆ ಸ್ವಾಗತ ಕೋರಿ ಹಾಕಲಾದ ಬ್ಯಾನರ್‌ಗೆ ಹಾನಿಗೈದಿದ್ದಾರೆ. ಇದು ಖಂಡನೀಯ. ಪೊಲೀಸರ ಸಮ್ಮುಖವೇ ಇಂತಹ ಕೃತ್ಯ ನಡೆಸುತ್ತಿರುವುದು ಖಂಡನೀಯ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News