×
Ad

ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸುವ ಟ್ವಿಟ್ಟರ್ ಖಾತೆಗಳನ್ನು ಫಾಲೋ ಮಾಡುತ್ತಿರುವ ಪ್ರಧಾನಿ!

Update: 2017-09-07 19:29 IST

ಹೊಸದಿಲ್ಲಿ, ಸೆ.7: ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ರ ಹತ್ಯೆಯನ್ನು ಸಂಭ್ರಮಿಸಿ ವಿಕೃತಿ ಮೆರೆದಿದ್ದ ಕೆಲ ಟ್ಟಿಟ್ಟರ್ ಖಾತೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಟ್ಟಿಟ್ಟರ್ ಖಾತೆ ಫಾಲೋ ಮಾಡುತ್ತಿರುವ ಬಗ್ಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಗೌರಿ ಲಂಕೇಶ್ ಹತ್ಯೆಯಾದ ಬಳಿಕ ಈ ದ್ವೇಷ ಕಾರುವ ಟ್ಟಿಟ್ಟರ್ ಖಾತೆಗಳು ಸಾವನ್ನೂ ಸಂಭ್ರಮಿಸುವ ತಮ್ಮ ವಿಕೃತಿಯನ್ನು ಮೆರೆಯಲಾರಂಭಿಸಿತು. ನಿಖಿಲ್ ದಾಧಿಚ್ ಎನ್ನುವ ಹೆಸರಿನ ಖಾತೆಯೊಂದು “ಹೆಣ್ಣುನಾಯಿಯೊಂದು ನಾಯಿಯ ಸಾವು ಪಡೆದಿದೆ. ಎಲ್ಲ ಕುನ್ನಿಗಳು ಒಂದೇ ರಾಗದಲ್ಲಿ ಗೋಳಾಡುತ್ತಿದೆ” ಎಂದು ಟ್ವೀಟ್ ಮಾಡಿತ್ತು.

“ಬುರ್ಹಾನ್ ವಾನಿಯ ನಂತರ ಗೌರಿ ಲಂಕೇಶ್ ಕೊಲ್ಲಲ್ಪಟ್ಟಿದ್ದಾರೆ… ಓಹ್ ಎಷ್ಟೊಂದು ದುಃಖದ ಸಂಗತಿ” ಎನ್ನುವ ಟ್ವೀಟೊಂದನ್ನು ಆಶಿಷ್ ಸಿಂಗ್ ಎನ್ನುವ ಹೆಸರಿನ ಖಾತೆಯೊಂದು ಮಾಡಿತ್ತು.

ರೀಟಾ ಎಂಬ ಹೆಸರಿನ ಮತ್ತೊಂದು ಖಾತೆ ಕೂಡ ಇದೇ ರೀತಿಯ ವಿಕೃತ ಟ್ವೀಟ್ ಗಳನ್ನು ಮಾಡಿತ್ತು. ಆದರೆ ವಿಪರ್ಯಾಸವೆಂದರೆ ಈ ಮೇಲೆ ತಿಳಿಸಿದ ಎಲ್ಲಾ ಖಾತೆಗಳನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಫಾಲೋ ಮಾಡುತ್ತಿದ್ದಾರೆ. ಇದುವೇ ಟ್ಟಿಟ್ಟರಿಗರ ಆಕ್ರೋಶಕ್ಕೂ ಕಾರಣವಾಯಿತು.

ಪ್ರಧಾನಿ ಮೋದಿಯವರು ಇಂತಹ ದ್ವೇಷಕಾರುವ ಖಾತೆಗಳನ್ನು ಅನ್ ಫಾಲೋ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ರಾತ್ರಿಯಿಂದ ಹುಟ್ಟಿಕೊಂಡ #BlockNarendraModi ಎನ್ನುವ ಆಂದೋಲನ ಇದೀಗ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ,

ಈ ಆಂದೋಲನದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಈ ಆಂದೋಲನವನ್ನು ಹುಟ್ಟುಹಾಕಿದ ಡಾ.ರಾಕೇಶ್ ಪರೀಖ್ ರನ್ನು ಟ್ಯಾಗ್ ಮಾಡಿ ಮೋದಿಯವರನ್ನು ಬ್ಲಾಕ್ ಮಾಡುತ್ತಿದ್ದಾರೆ.

ಟ್ವಿಟ್ಟರ್ ನಲ್ಲಿ ದ್ವೇಷ ಕಾರುವ ಅಕೌಂಟ್ ಗಳನ್ನು ಫಾಲೋ ಮಾಡುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇಂತಹ ಸಮಾಜ ಘಾತುಕ ಮನಸ್ಥಿತಿಯ ವ್ಯಕ್ತಿಗಳನ್ನು ಪ್ರಧಾನಿ ಹೇಗೆ ಫಾಲೋ ಮಾಡುತ್ತಾರೆ. ಅವರು ಅಂತಹ ಖಾತೆಗಳನ್ನು ಅನ್ ಫಾಲೋ ಮಾಡುವವರೆಗೆ ಪ್ರಧಾನಿಯನ್ನು ಬ್ಲಾಕ್ ಮಾಡಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ಇಂತಹ ಅಕೌಂಟ್ ಗಳನ್ನು ಫಾಲೋ ಮಾಡುವುದಕ್ಕೆ ಕಾರಣವೇನು ಎಂದು ದೇಶದ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಪ್ರಶ್ನಿಸಿದ್ದಾರೆ.

“ದೇಶದ ಜನರು ಪ್ರಧಾನ ಮಂತ್ರಿಯವರಿಗೆ ಪ್ರೀತಿ ನೀಡಿದ್ದಾರೆ. ಪ್ರಧಾನಿಯವರು ಯಾರನ್ನು ಫಾಲೋ ಮಾಡಬೇಕು?, 1,700 ಖಾತೆಗಳನ್ನು ಅವರು ಫಾಲೋ ಮಾಡುತ್ತಿದ್ದು, ಅದರಲ್ಲಿ ದ್ವೇಷಕಾರುವ ಖಾತೆಗಳೂ ಸೇರಿವೆ. ಆದರೆ ಅವರ ಪಕ್ಷದ ಎಲ್ಲಾ ಶಾಸಕರ ಖಾತೆಗಳನ್ನೂ ಅವರು ಫಾಲೋ ಮಾಡುತ್ತಿಲ್ಲ” ಎಂದು ರವೀಶ್ ಕುಮಾರ್ ಹೇಳಿದ್ದರು.

#BlockNarendraModi  ಅಭಿಯಾನಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗುರುವಾರ 25 ಸಾವಿರಕ್ಕೂ ಹೆಚ್ಚು ಟ್ವೀಟ್ ಗಳನ್ನು ಮಾಡಲಾಗಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News