ಕೌಶಲ ವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯೂ ಆಗಬೇಕು: ಪ್ರೊ.ಎನ್.ಆರ್.ಶೆಟ್ಟಿ
ಕೊಣಾಜೆ, ಸೆ. 7: ಶಿಕ್ಷಣ ಸಂಸ್ಥೆಗಳು ಉತ್ತಮ ಆಡಳಿತದ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೂ ಗಮನ ಹರಿಸಬೇಕು. ಶಿಕ್ಷಣದಲ್ಲಿ ಬದಲಾವಣೆ ಎಂಬುದು ಅರ್ಥ ರಹಿತವಾಗಬಾರದು. ಪರೀಕ್ಷೆಯಿಂದ ಮೊದಲ್ಗೊಂಡು ಎಲ್ಲ ಬಗೆಯಲ್ಲೂ ಸಮಗ್ರ ಅಧ್ಯಯನ ಅಗತ್ಯ. ವಿದ್ಯಾದಾನ ಶ್ರೇಷ್ಠವಾಗಿದ್ದು ಆಧುನಿಕ ಕಾಲಘಟ್ಟದಲ್ಲಿ ಶಿಕ್ಷಣದಲ್ಲಿ ಬಹಳಷ್ಟು ಸವಾಲುಗಳಿವೆ. ಭಾರತ ಅಭಿವೃದ್ಧಿ ಸಾಧಿಸುತ್ತಾ ಮುಂದುವರಿಯುತ್ತಿದ್ದು ಭಾರತಕ್ಕೆ ಯುವ ಸಮುದಾಯ ಬಲ ನೀಡಿದೆ. ಹಾಗಾಗಿ ಇಲ್ಲಿ ಬದಲಾವಣೆಗೆ ಸಾಕಷ್ಟು ಅವಕಾಶಗಳಿದ್ದು ಕೌಶಲ್ಯ ವೃದ್ಧಿಯತ್ತ ಗಮನ ಹರಿಸುತ್ತಾ ಉದ್ಯೋಗ ಸೃಷ್ಟಿಸುವ ಕಾರ್ಯ ನಡೆಯಬೇಕು ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಎನ್. ಆರ್. ಶೆಟ್ಟಿ ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಜ್ಞಾನ ಪಸರಿಸುತ್ತಾ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಶಿಕ್ಷಕರನ್ನು ಗೌರವಿಸುವ ಸಲುವಾಗಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತಿದ್ದು ಆ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುವ ಶಿಕ್ಷಕರ ಮಹತ್ವವನ್ನು ಸಮಾಜಕ್ಕೆ ಸಾರಿದಂತಾಗಿದೆ ಎಂದರು.
ಭಾರತದ ಶಿಕ್ಷಣ ವ್ಯವಸ್ಥೆ ಹಲವು ಶತಮಾನಗಳ ಹಿಂದೆಯೇ ಪ್ರಪಂಚದ ಇತರ ರಾಷ್ಟ್ರಗಳ ಗಮನ ಹರಿಸಿತ್ತು. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಗುರುಕುಲ ಶಿಕ್ಷಣ ಪದ್ಧತಿ ಪರಿಣಾಮಕಾರಿ ಪ್ರಭಾವ ಬೀರಿತ್ತು. ಚಾಣಕ್ಯನಂತಹ ಖ್ಯಾತ ಅರ್ಥಶಾಸ್ತ್ರಜ್ಞರು ಗುರುಕುಲ ಪದ್ಧತಿಯಲ್ಲಿಯೇ ಕಲಿತವರು. ಹಾಗೆಯೇ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದ ನಲಂದಾ, ತಕ್ಷಶಿಲಾ ವಿಶ್ವವಿದ್ಯಾಲಯಗಳು ಇಂದಿಗೂ ನಮ್ಮ ಶಿಕ್ಷಣದ ಹೆಗ್ಗುರುತಾಗಿ ಉಳಿದಿದೆ. ಮಂಗಳೂರು ವಿವಿ ಕಳೆದ ಕೆಲವು ವರ್ಷಗಳಲ್ಲಿ ಅಮೂಲಾಗ್ರ ಬದಲಾವಣೆ ಕಂಡಿದ್ದು ನಿಜಕ್ಕೂ ಶ್ಲಾಘನೀಯ ಎಂದು ಸಂತಸ ವ್ಕಕ್ತಪಡಿಸಿದರು.
ಮಂಗಳೂರು ವಿವಿಯ ಕುಲಪತಿ ಪ್ರೊ.ಕೆ. ಭೈರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯ ವ್ಯಾಪ್ತಿಯಲ್ಲಿನ ಬೋಧನ ಹಾಗೂ ಸಂಶೋಧನೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಅಫ್ ಇಂಡಿಯಾ ಯುನಿವರ್ಸಿಟಿಯ ವಿಶ್ರಾಂತ ಕುಲಪತಿ ಪ್ರೊ.ಎ. ಜಯಗೋವಿಂದ, ಮಣಿಪಾಲ ಮಾಧವ ಪೈ ಸ್ಮಾರಕ ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪ್ರೊ. ಶ್ರೀಪತಿ ತಂತ್ರಿ ಹಾಗೂ ಮಡಿಕೇರಿಯ ಫೀಲ್ಡ್ ಮಾರ್ಶಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ. ಪುಷ್ಪಾ ಪುಟ್ಟಣ್ಣ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸನ್ಮಾನಿತರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಕೆ. ಭೈರಪ್ಪ ಅವರು ಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಸಿದ ಸಾಧನೆಯ ವಿವರಗಳುಳ್ಳ ಸಂಚಿಕೆಯನ್ನು ಪ್ರೊ.ಎ್.ಅರ್. ಶೆಟ್ಟಿ ಬಿಡುಗಡೆಗೊಳಿಸಿದರು.
ಮಂಗಳೂರು ವಿವಿಯ ಟೀಚರ್ಸ್ ಎಸೋಸಿಯೇಶನ್‌ನ ನಿರ್ದೇಶಕ ಪ್ರೊ. ಇಸ್ಮಾಯಿಲ್, ವಿವಿಯ ಹಣಕಾಸು ಅಧಿಕಾರಿ ಡಾ. ದಯಾನಂದ ನಾಯಕ್ ಹಾಗೂ ವಿವಿಯ ದೈಹಿಕ ಶಿಕ್ಷಕ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸನ್ಮಾನಪತ್ರ ವಾಚಿಸಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಕೊಡಲಾಗುವ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಇತಿಹಾಸ ವಿಭಾಗದ ಪ್ರೊ.ಉದಯ ಬಾರ್ಕೂರು ಹಾಗೂ ವಿಜ್ಞಾನ ವಿಭಾಗದ ಪ್ರೊ.ನಾರಾಯಣ ಅವರು ಪಡೆದುಕೊಂಡರು.
ಮಂಗಳೂರು ವಿವಿಯ ಕುಲಸಚಿವ ಪ್ರೊ.ಕೆ.ಎಂ. ಲೋಕೇಶ್ ಸ್ವಾಗತಿಸಿದರು. ವಿವಿಯ ಡಾ. ಪಿ. ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಹಾಗೂ ವಿವಿಯ ಆಂಗ್ಲಭಾಷಾ ವಿಭಾಗದ ಪ್ರಾಧ್ಯಾಪಕ ಪ್ರೊ. ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ವಿವಿಯ ಪರೀಕ್ಷಾಂಗ ಕುಲಸಚಿವ ಪ್ರೊ.ಎ.ಎಂ. ಖಾನ್ ಉಪಸ್ಥಿತರಿದ್ದರು.