×
Ad

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎನ್‌ಐಎ ತನಿಖೆಗೆ ಮಾಯಾವತಿ ಆಗ್ರಹ

Update: 2017-09-07 19:54 IST

ಲಕ್ನೊ, ಸೆ.7: ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ಘಟನೆ ಬಹುದೊಡ್ಡ ಸಂಚಿನ ಒಂದು ಭಾಗವೆಂದು ಭಾಸವಾಗುತ್ತಿದ್ದು ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಮಿತಿ (ಎನ್‌ಐಎ)ಗೆ ವಹಿಸಬೇಕು ಎಂದು ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ನಾಯಕಿ ಮಾಯಾವತಿ ಆಗ್ರಹಿಸಿದ್ದಾರೆ.

 ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಕೊಲೆಯ ಘಟನೆಯ ಹಿಂದೆ ಬಹುದೊಡ್ಡ ಸಂಚು ಅಡಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ದಾಬೋಲ್ಕರ್, ಪನ್ಸಾರೆ, ಕಲಬುರಗಿ ಮುಂತಾದ ಸಾಹಿತಿಗಳ ಕೊಲೆಯೂ ಸೇರಿದಂತೆ ಇವನ್ನು ರಾಷ್ಟ್ರೀಯ ತನಿಖಾ ಸಮಿತಿಗೆ ಒಪ್ಪಿಸಲು ಕೇಂದ್ರಸರಕಾರ ಆದೇಶಿಸಬೇಕು. ಇಂತಹ ಘಟನೆ ಆಗಿಂದಾಗ್ಗೆ ಮರುಕಳಿಸುತ್ತಿದ್ದು , ಕೇವಲ ಖಂಡನೆ ವ್ಯಕ್ತಪಡಿಸುವ ಬದಲು ಕೇಂದ್ರ ಸರಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದು ಮಾಯಾವತಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಸ್ವತಂತ್ರ ಬರಹಗಾರರು, ಪತ್ರಕರ್ತರು, ಬುದ್ಧಿಜೀವಿಗಳನ್ನು ನಿರಂತರವಾಗಿ ಹತ್ಯೆ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆಯ ಅಗತ್ಯವಿದೆ. ಗೋರಕ್ಷಕರ ಪ್ರಕರಣ, ಲವ್-ಜಿಹಾದ್, ಆ್ಯಂಟಿ ರೋಮಿಯೊ, ಘರ್ ವಾಪ್ಸಿ ಮುಂತಾದ ಅಹಿತಕರ ಘಟನೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರ ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಪರಿಗಣಿಸಿಲ್ಲದಿರುವುದು ಕಳವಳಕಾರಿಯಾಗಿದೆ ಎಂದು ಮಾಯಾವತಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News