×
Ad

ಸಾಮಾನ್ಯ ಗುರು ಕಲಿಸಿದರೆ, ಉತ್ತಮ ಗುರು ಪ್ರಚೋದಿಸುತ್ತಾನೆ: ಭಾಸ್ಕರ ರೈ ಕುಕ್ಕುವಳ್ಳಿ

Update: 2017-09-07 20:47 IST

ಮಂಗಳೂರು, ಸೆ.7: 'ಕಲಿಯುವ ಹಂತದಲ್ಲಿ ನಾವು ಹಲವಾರು ಗುರುಗಳ ಸಂಪರ್ಕಕ್ಕೆ ಬಂದಿರುತ್ತೇವೆ. ಅಕ್ಷರವೊಂದನ್ನು ಕಲಿಸಿದಾತನೂ ಗುರುವೇ. ಆದರೆ ಎಲ್ಲರೂ ನೆನಪಲ್ಲಿ ಉಳಿಯರು. ಸಾಮಾನ್ಯ ಗುರು ಕಲಿಸುತ್ತಾನೆ; ಆದರೆ ಉತ್ತಮ ಗುರು ಪ್ರಚೋದನೆ ನೀಡುತ್ತಾನೆ. ಜೀವನದ ಸವಾಲುಗಳನ್ನು ಎದುರಿಸಲು ನಮ್ಮನ್ನು ಸಿದ್ಧಪಡಿಸುವವನೇ ನಿಜವಾದ ಗುರು' ಎಂದು ಕವಿ, ಚಿಂತಕ ಮತ್ತು ಪ್ರಾಧ್ಯಾಪಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

ನಗರದ ಕೊಡಿಯಾಲಬೈಲ್  ಬ್ರಿಲ್ಲಿಯಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಜರಗಿದ 'ಶಿಕ್ಷಕ ದಿನಾಚರಣೆ ' ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. 'ಗುರು ವಿತ್ತಾಪಹಾರಕನಲ್ಲ; ಅವನು ಶಿಷ್ಯ ಚಿತ್ತಾಪಹಾರಕ. ತಿಂಗಳ ಕೊನೆಯಲ್ಲಿ ಸಂಬಳಕ್ಕಾಗಿಯೇ ಕಾಯುವವರು ತಮ್ಮ ವೃತ್ತಿಗೆ ಎಂದೂ ನ್ಯಾಯ ಸಲ್ಲಿಸಲಾರರು' ಎಂದವರು ಮಾರ್ಮಿಕವಾಗಿ ನುಡಿದರು. ಬ್ರಿಲ್ಲಿಯಂಟ್ ವಿದ್ಯಾಸಂಸ್ಥೆಗಳ ಆಡಳಿತ ನಿರ್ದೇಶಕ ಸಿಎ ರಾಮಮೋಹನ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಶಿಕ್ಷಣ, ಸಾಹಿತ್ಯ ಮತ್ತು ಮಾಧ್ಯಮ ಸೇವೆಗಾಗಿ ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ 'ಬ್ರಿಲ್ಲಿಯಂಟ್ ಪ್ರಶಸ್ತಿ' ನೀಡಿ ಸನ್ಮಾನಿಸಲಾಯ್ತು. ಉಪನ್ಯಾಸಕಿ ಆಶಾ ಅಭಿನಂದನಾ ಭಾಷಣ ಮಾಡಿದರು. ನಿವೃತ್ತ ಶಿಕ್ಷಣಾಧಿಕಾರಿ ಮೋಹನ್ ದಾಸ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಚಾರ್ಯ ಬಿಂದುಸಾರ ಶೆಟ್ಟಿ ಸ್ವಾಗತಿಸಿದರು. ಉಪ ಪ್ರಾಂಶುಪಾಲ ರಘುಪತಿ ಪೈ ವಂದಿಸಿದರು.ವಿದ್ಯಾರ್ಥಿಗಳಿಂದ ಶಿಕ್ಷಕರಿಗಾಗಿ ಮೋಜಿನ ಆಟ ಮತ್ತು ಸಾಂಸ್ಕೃತಿಕ ವೈವಿಧ್ಯ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News