ಲೈಂಗಿಕ ದೌರ್ಜನ್ಯ ಪ್ರಕರಣ: ತೇಜಪಾಲ್ ವಿರುದ್ಧ ಸೆ.28ರಂದು ಆರೋಪ ರೂಪಿಸಲಿರುವ ನ್ಯಾಯಾಲಯ

Update: 2017-09-07 15:46 GMT

ಪಣಜಿ,ಸೆ.7: ಕಿರಿಯ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದ ಆರೋಪವನ್ನು ಹೊತ್ತಿರುವ ಹಿರಿಯ ಪತ್ರಕರ್ತ ಹಾಗೂ ಲೇಖಕ ತರುಣ್ ತೇಜಪಾಲ್ ವಿರುದ್ಧ ಇಲ್ಲಿಯ ನ್ಯಾಯಾಲಯವು ಸೆ.28ರಂದು ಆರೋಪಗಳನ್ನು ರೂಪಿಸಲಿದೆ.

2013,ನವಂಬರ್‌ನಲ್ಲಿ ಗೋವಾದಲ್ಲಿ ಸಮ್ಮೇಳನವೊಂದರ ಸಂದರ್ಭ ಪಂಚತಾರಾ ಹೋಟೆಲ್ಲೊಂದರ ಲಿಫ್ಟ್‌ನಲ್ಲಿ ತೇಜಪಾಲ್ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ತೆಹಲ್ಕಾ ಮ್ಯಾಗಝಿನ್‌ನ ಪತ್ರಕರ್ತೆ ಆರೋಪಿಸಿದ್ದರು. ತೇಜಪಾಲ್ ತೆಹಲ್ಕಾದ ಸ್ಥಾಪಕರಾಗಿದ್ದಾರೆ. ಮಹಿಳೆ ಅದೇ ತಿಂಗಳಲ್ಲಿ ತೆಹಲ್ಕಾದ ಹುದ್ದೆಯನ್ನು ತೊರೆದಿದ್ದರೆ, ತೇಜಪಾಲ್ ಕೂಡ ಸಂಪಾದಕ ಸ್ಥಾನದಿಂದ ಕೆಳಗಿಳಿದಿದ್ದರು.

ನ.30ರಂದು ತೇಜಪಾಲ್ ಮತ್ತು ತೆಹಲ್ಕಾದ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧುರಿ ನಡುವಿನ ಸರಣಿ ಇ-ಮೇಲ್‌ಗಳು ಸೋರಿಕೆಯಾದ ಬಳಿಕ ತೇಜಪಾಲ್‌ರನ್ನು ಗೋವಾ ಪೊಲೀಸರು ಬಂಧಿಸಿದ್ದರು.

ತೇಜಪಾಲ್ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಸದ್ಯ ಜಾಮೀನಿನಲ್ಲಿ ಹೊರಗಿರುವ ಅವರು ರಹಸ್ಯ ವಿಚಾರಣೆಯನ್ನು ನಡೆಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News