×
Ad

ತಾಲೂಕು ಘೋಷಣೆ: ಹೆಬ್ರಿಯಲ್ಲಿ ಸಂಭ್ರಮಾಚರಣೆ; ಮುಖ್ಯಮಂತ್ರಿಗೆ ಭಂಡಾರಿ ಅಭಿನಂದನೆ

Update: 2017-09-07 21:40 IST

ಹೆಬ್ರಿ, ಸೆ.7: ರಾಜ್ಯ ಸರಕಾರ ಹೆಬ್ರಿಯನ್ನು ನೂತನ ತಾಲೂಕಾಗಿ ಘೋಷಣೆ ಮಾಡಿದೆ ಎಂದು ಹೆಬ್ರಿ ತಾಲೂಕು ಹೋರಾಟ ಸಮಿತಿಯ ನೇತೃತ್ವ ವಹಿಸಿರುವ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಗುರುವಾರ ಸುದ್ಧಿ ಗೋಷ್ಠಿಯಲ್ಲಿ ತಿಳಿಸಿದರು.

ಹೆಬ್ರಿ ತಾಲೂಕು ಮಾಡುವುದು ಎಲ್ಲರಿಗಿಂತ ಹೆಚ್ಚು ನನಗೆ ಮುಖ್ಯವಾಗಿತ್ತು. ಅದನ್ನು ಸತತ ಹೋರಾಟ ಬಳಿಕ ವೀರಪ್ಪಮೊಯ್ಲಿಯವರ ಶಿಫಾರಸ್ಸಿನಂತೆ ಮುಖ್ಯಮಂತ್ರಿಗಳು ಮಾಡಿದ್ದಾರೆ. ಈಗ ಬೆನ್ನು ತಟ್ಟಿಕೊಳ್ಳುವವರು ಅನೇಕರಿದ್ದಾರೆ ಎಂದು ಅವರು ಹೇಳಿದರು.

ಹೆಬ್ರಿ ತಾಲೂಕು ಘೋಷಣೆಯ ಯಶಸ್ಸು ಮುಖ್ಯಮಂತ್ರಿ ಸಿದ್ಧರಾಮಯ್ಯ, ವೀರಪ್ಪ ಮೊಯ್ಲಿ, ಆಸ್ಕರ್ ಫೆರ್ನಾಂಡಿಸ್, ಭಾಸ್ಕರ ಜೋಯಿಸ್, ನೀರೆ ಕೃಷ್ಣ ಶೆಟ್ಟಿ, ಪ್ರಸನ್ನ ಬಲ್ಲಾಳ್, ಮಂಜುನಾಥ ಪೂಜಾರಿ ಸಹಿತ ಹಲವು ಪ್ರಮುಖರಿಗೆ ಸಲ್ಲಬೇಕು. ಹೋರಾಟಕ್ಕೆ ಜಯಸಿಕ್ಕಿದೆ. ಮನಸ್ಸು ತುಂಬಿ ಬಂದಿದೆ. ಹೆಬ್ರಿ ತಾಲೂಕು ಐತಿಹಾಸಿಕ ದಾಖಲೆಯ ಪುಟಕ್ಕೆ ಸೇರಿದೆ ಎಂದು ಗೋಪಾಲ ಭಂಡಾರಿ ಹರ್ಷ ವ್ಯಕ್ತಪಡಿಸಿದರು.

ಸಂಭ್ರಮಾಚರಣೆ: ಹೋರಾಟ ಸಮಿತಿಯ ಸದಸ್ಯರು, ಪ್ರಮುಖರು, ಕಾಂಗ್ರೆಸ್ ಕಾರ್ಯಕರ್ತರು ಹೆಬ್ರಿ ಚಾರದ ಪ್ರಮುಖ ರಸ್ತೆಯಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ತಾಲೂಕು ಆಗದ ನೋವಿಗೆ ಕಾಂಗ್ರೆಸ್‌ಗೆ ನೀಡಿದ ರಾಜೀನಾಮೆಯನ್ನು ವಾಪಾಸ್ಸು ಪಡೆದಿರುವುದಾಗಿ ನವೀನ ಅಡ್ಯಂತಾಯ ಪ್ರಕಟಿಸಿದರು.

 ಕಾಂಗ್ರೆಸ್ ಪ್ರಮುಖರಾದ ಎಚ್.ಪ್ರವೀಣ್ ಬಲ್ಲಾಳ್, ಶೀನ ಪೂಜಾರಿ ಮಂಜುನಾಥ ಪೂಜಾರಿ, ಸುಜಾತ ಲಕ್ಷ್ಮಣ್, ಜಯಕರ ಪೂಜಾರಿ, ನವೀನ ಅಡ್ಯಂತಾಯ, ಸುರೇಶ್ ಶೆಟ್ಟಿ, ಹೋರಾಟಗಾರರಾದ ಕೆರೆಬೆಟ್ಟು ಸಂಜೀವ ಶೆಟ್ಟಿ, ಹೆಚ್.ಕೆ.ಶ್ರೀಧರ ಶೆಟ್ಟಿ, ಲಯನ್ಸ್‌ನ ಬೇಳಂಜೆ ಹರೀಶ ಪೂಜಾರಿ, ಟಿ.ಜಿ.ಆಚಾರ್ಯ ಮತ್ತಿತರರು ಇದರಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News