ಹೆಬ್ರಿ ತಾಲೂಕು: 50 ವಷಗರ್ಳ ಕನಸು ಕೊನೆಗೂ ನನಸು
ಹೆಬ್ರಿ, ಸೆ.7: ಹೆಬ್ರಿ ಜನತೆಯ 50 ವರ್ಷಗಳ ಕೂಗು ಕೊನೆಗೂ ದೊರೆಗಳಿಗೆ ಕೇಳಿದೆ. ತಾಲೂಕು ಹೋರಾಟದ ಕಡತಗಳಿಗೆ ಮುಕ್ತಿ ದೊರೆತಿದೆ. ಹೆಬ್ರಿ ಪರಿಸರದ ಜನ ಜನಪ್ರತಿನಿಧಿಗಳ ಬಹುಕಾಲದ ಕನಸು ನನಸಾಗಿದೆ. ಕೊನೆಗೂ ಹೆಬ್ರಿ ತಾಲೂಕಾಗಿದೆ. ಹೆಬ್ರಿ ಎಲ್ಲಡೆ ಸಂಭ್ರಮ ಮನೆ ಮಾಡಿದೆ.
ಪಶ್ಚಿಮಘಟ್ಟದ ತಪ್ಪಲಲ್ಲಿ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ ಕೇಂದ್ರವಾಗಿ ವಿವಿಧ ಗ್ರಾಮಗಳ ನಡುವಿನ ಸಂಪರ್ಕ ಸೇತುವಾಗಿರುವ ಹೆಬ್ರಿಯನ್ನು ಮಲೆನಾಡ ವಲಯದ ಗ್ರಾಮೀಣ ಪ್ರದೇಶದ ತಾಲೂಕಾಗಬೇಕೆನ್ನುವ ಹೋರಾಟ ರಾಜಕೀಯ ವಲಯದ ಸಹಿತ ಹಲವು ಆಯಾಮಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ. ಹೆಬ್ರಿಯ ಎಚ್.ಸುಭೋದ್ ಬಲ್ಲಾಳ್ ಮತ್ತು ಬೇಳಂಜೆ ವಿಠ್ಠಲ ಹೆಗ್ಡೆ ಅವರ ನೇತೃತ್ವದಲ್ಲಿ ಅನೇಕರು ಹೆಬ್ರಿ ತಾಲೂಕಿನ ಹೋರಾಟಕ್ಕೆ ನಾಂದಿ ಹಾಡಿದ್ದರು.
ತಾಲೂಕಿನ ಕನಸು ಗರಿಗೆದರುತ್ತಿದ್ದಾಗಲೇ ಒಮ್ಮೆ ತಾಲೂಕು ಪುರ್ನರಚನಾ ಆಯೋಗ ಟಿ.ಎಂ.ಹುಂಡೇಕರ್ ನೇತೃತ್ವದಲ್ಲಿ ಮಧ್ಯರಾತ್ರಿ ಹೆಬ್ರಿಗೆ ಬಂದು ಹೆಬ್ರಿ ತಾಲೂಕು ಅನವಶ್ಯಕ ಎಂದು ಶಿಫಾರಸ್ಸು ಮಾಡಿದ್ದರಿಂದ ತಾಲೂಕಿನ ಹೋರಾಟ ಅಂದಿನಿಂದ ತೆರೆಮರೆಗೆ ಸರಿದಿತ್ತು. ಸರಕಾರ ಮತ್ತೆ ಹೊಸ ತಾಲೂಕುಗಳ ರಚನೆಗೆ ಎಂ.ಬಿ.ಪ್ರಕಾಶ್ ನೇತೃತ್ವದ ಸಮಿತಿ ರಚನೆ ಮಾಡಿದ ಬಳಿಕ ಹೆಬ್ರಿ ತಾಲೂಕಿನ ಆಸೆ ಮತ್ತೆ ಚಿಗುರಿತು. ಸಮಿತಿ ಉಡುಪಿಗೆ ಆಗಮಿಸಿ ದಾಗ ಅಂದಿನ ಶಾಸಕ ಎಚ್. ಗೋಪಾಲ ಭಂಡಾರಿ ನೇತೃತ್ವದಲ್ಲಿ ಹೋರಾಟ ಸಮಿತಿ, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರಮುಖರು ಸಮಗ್ರ ದಾಖಲೆಯ ಸಹಿತ ಮನವಿ ಮಾಡಿದ್ದರು.
ಎಂ.ಬಿ.ಪ್ರಕಾಶ್ ನೇತೃತ್ವದ ತಾಲೂಕು ಪುನ:ರಚನಾ ಆಯೋಗ ಹೆಬ್ರಿ ತಾಲೂಕಾಗಲೇಬೇಕೆಂದು ಬಲವಾಗಿ ಶಿಫಾರಸ್ಸು ಮಾಡಿದ್ದು, ಇದರಿಂದ ಹೆಬ್ರಿ ಹೋರಾಟಕ್ಕೆ ಭಾರಿ ಬಲ ಬಂದಿತ್ತು. ಆದರೆ ಎಂ.ಬಿ.ಪ್ರಕಾಶ್ ಶಿಫಾರಸ್ಸಿನಂತೆ ಜಗದೀಶ ಶೆಟ್ಟರ್ ಸರಕಾರ 43 ಹೊಸ ತಾಲೂಕು ಘೋಷಣೆ ಮಾಡಿ ಹೆಬ್ರಿಯನ್ನು ಕೈಬಿಟ್ಟಿತ್ತು. ನಿರಾಸೆ ನಡುವೆ ಹೆಬ್ರಿ ಜನತೆ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಶಾಸಕರಾಗಿದ್ದ ಗೋಪಾಲ ಭಂಡಾರಿ ಹೆಬ್ರಿಯನ್ನು ಪರಿಗಣಿಸುವಂತೆ ಒತ್ತಾಯಿಸಿ ವಿಧಾನಸಭೆಯ ಒಳಗೆ ಮತ್ತು ಹೊರಗೆ ಬಿರುಸಿನ ಹೋರಾಟ ನಡೆಸಿದ್ದರು. ವಿವಿಧ ಹಂತದ ಹೋರಾಟಗಳೊಂದಿಗೆ ರಾಜಕೀಯ ಕೆಸರೆರೆಚಾಟದ ಹೋರಾಟಗಳು ನಡೆದವು. ಆರೋಪ ಪ್ರ್ಯಾರೋಪಗಳ ಸುರಿಮಳೆಯಾಯಿತು.
ಬದಲಾದ ಸರಕಾರ: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ವಿತ್ವಕ್ಕೆ ಬಂದಾಗ ಹೊಸ ನಿರೀಕ್ಷೆಗಳು ಹುಟ್ಟಿಕೊಂಡವು. ಉಸ್ತುವಾರಿ ಸಚಿವರ ಮೂಲಕ ಕಂದಾಯ ಸಚಿವರು, ಮುಖ್ಯಮಂತ್ರಿಗಳಿಗೆ ಮತ್ತೆಮತ್ತೆ ಮನವಿ ನೀಡಲಾಯಿತು. ನೀರೆ ಕೃಷ್ಣ ಶೆಟ್ಟಿ, ಭಾಸ್ಕರ ಜೋಯಿಸ್ ಮುಂದಾಳ್ವತದ ತಾಲೂಕು ಹೋರಾಟ ಸಮಿತಿ ನಿರಂತರ ಮನವಿ ಸಲ್ಲಿಸುತ್ತಾ ಬಂತು. ಈ ನಡುವೆ ಹುಟ್ಟಿಕೊಂಡ ಸಮಾನಮನಸ್ಕ ಹೆಬ್ರಿ ತಾಲೂಕು ಹೋರಾಟ ಸಮಿತಿ ಶಾಸಕ ಸುನೀಲ್ ಕುಮಾರ್ ನೇತೃತ್ವದಲ್ಲಿ ಹೆಬ್ರಿ ತಾಲೂಕಿಗೆ ಒತ್ತಾಯಿಸಿತು.
ಹೆಬ್ರಿ ಆಸೆ-ನಿರಾಸೆ: ಗೋಪಾಲ ಭಂಡಾರಿ ಒತ್ತಾಯ, ವೀರಪ್ಪ ಮೊಯ್ಲಿ ಅವರ ಶಿಫಾರಸ್ಸಿನಂತೆ ಕಳೆದ ಬಜೆಟ್‌ನಲ್ಲಿ ಹೆಬ್ರಿ ತಾಲೂಕು ಘೋಷಣೆ ಇನ್ನೇನು ಆಗಿಯೇ ಬಿಟ್ಟಿತು ಎನ್ನುವಾಗ ಕೊನೆಗಳಿಗೆಯಲ್ಲಿ ಹೆಬ್ರಿಯನ್ನು ಬಲಿ ಕೊಡಲಾಯಿತು. ಈ ಘಟನೆ ಹೆಬ್ರಿ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೂ ಕಾರಣವಾಯಿತು.
ಹೋರಾಟಗಳು ನಡೆದವು. ತಾಲೂಕು ಕೈತಪ್ಪಿದ ನೋವಿನಿಂದ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀರೆ ಕೃಷ್ಣ ಶೆಟ್ಟಿ ರಾಜೀನಾಮೆ ನೀಡಿದರು. ಬಿಜೆಪಿ ನೇತೃತ್ವದಲ್ಲಿ ಸರಕಾರ ವಿರುದ್ಧ ಪ್ರತಿಭಟನೆ ನಡೆುತು.
ಕಾರ್ಕಳ ಶಾಸಕರಾಗಿದ್ದ ಎಚ್.ಗೋಪಾಲ ಭಂಡಾರಿ ಅವರಿಗೆ ಹೆಬ್ರಿ ತಾಲೂಕಾಗುವುದು ಅತಿ ಮುಖ್ಯವಾಗಿತ್ತು. ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ ಹೆಬ್ರಿಯನ್ನು ಕೈ ಬಿಟ್ಟಾಗ ತಕ್ಷಣ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೆಬ್ರಿಯನ್ನು ವಿಶೇಷ ಆದ್ಯತೆಯ ನೆಲೆಯಲ್ಲಿ ಪರಿಗಣಿಸಿ ಎಂದು ಮನವಿ ಮಾಡಿದರು. ಕೊನೆಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಮೂಲಕ ಸಿದ್ದರಾಮಯ್ಯರ ಮನ ಒಲಿಸಲು ಯಶಸ್ವಿಯಾದರು. ಈ ಮೂಲಕ ಹೆಬ್ರಿಯ ಬಹುಕಾಲದ ಕನಸು ಈಗ ನನಸಾಗಿದೆ.
ಹೆಬ್ರಿ ತಾಲೂಕನ್ನು ಕಾಂಗ್ರೆಸ್ ಸರಕಾರ ಕೈಬಿಟ್ಟಾಗ ಹೆಬ್ರಿಯಲ್ಲಿ ಬಿಜೆಪಿ ಪ್ರತಿಭಟಿಸಿತು. ವಿಧಾನಸಭೆಯಲ್ಲಿ ಶಾಸಕ ಸುನೀಲ್ ಕುಮಾರ್ ಕೈಬಿಟ್ಟ ವಿಚಾರಕ್ಕೆ ಮತ್ತೆ ಹೆಬ್ರಿಯನ್ನು ತಾಲೂಕು ಮಾಡುವಂತೆ ಒತ್ತಾಯಿಸಿದರು. ಮನವಿಯನ್ನೂ ನೀಡಿದರು. ಈಗ ಎಲ್ಲರ ಪ್ರಯತ್ನ ಸಫಲವಾಗಿ ಹೆಬ್ರಿ ತಾಲೂಕಾಗಿ ಮೇಲ್ದರ್ಜೆಗೇರಿದೆ.
ಚಾರದಲ್ಲಿ ತಾಲೂಕು ಕಚೇರಿಗೆ ಜಾಗ
ಹೆಬ್ರಿಯ ಚಾರ ಗ್ರಾಮದಲ್ಲಿ ಹಲವಾರು ಎಕರೆ ಜಾಗ ತಾಲೂಕು ಕೇಂದ್ರಕ್ಕಾಗಿ ಮೀಸಲಿದೆ. ಕಾರ್ಕಳ, ಕುಂದಾಪುರ ಮತ್ತು ಉಡುಪಿ ತಾಲೂಕಿನ 22 ಕಂದಾಯ ಗ್ರಾಮಗಳು ಕೇವಲ 18, 20 ಕಿ.ಮಿ. ಸಮೀಪದಲ್ಲೇ ಘೋಷಿತ ಹೆಬ್ರಿ ತಾಲೂಕಿಗೆ ಸೇರ್ಪಡೆಗೊಳ್ಳಲಿದೆ. ಹಿಂದೊಮ್ಮೆ ಉಡುಪಿ ಜಿಲ್ಲೆಗೆ ಮಧ್ಯಭಾಗದಲ್ಲಿ ಕೇಂದ್ರ ಸ್ಥಾನವಾಗಿರುವ ಹೆಬ್ರಿಯನ್ನು ಜಿಲ್ಲಾಡಳಿತದ ಕೇಂದ್ರ ಸ್ಥಾನವನ್ನಾಗಿಸುವ ಇರಾದೆ ಕೂಡ ಹೊಂದಲಾಗಿತ್ತು.