ಸರ್ವರ ರಕ್ಷಣೆಗೆ ಸರ್ವ ಪ್ರಯತ್ನ: ಮ್ಯಾನ್ಮಾರ್ ನಾಯಕಿ ಸೂ ಕಿ ಹೇಳಿಕೆ
ಕಾಕ್ಸ್ ಬಝಾರ್ (ಬಾಂಗ್ಲಾದೇಶ), ಸೆ. 7: ಸಂಘರ್ಷಪೀಡಿತ ರಖೈನ್ ರಾಜ್ಯದಲ್ಲಿ ಪ್ರತಿಯೊಬ್ಬರನ್ನು ರಕ್ಷಿಸಲು ತನ್ನ ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಗುರುವಾರ ಹೇಳಿದ್ದಾರೆ.
ಈ ನಡುವೆ, ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಮ್ಯಾನ್ಮಾರ್‌ನಿಂದ ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದವರ ಸಂಖ್ಯೆ 1.64 ಲಕ್ಷಕ್ಕೇರಿದೆ.
ಅಲ್ಪಸಂಖ್ಯಾತ ರೊಹಿಂಗ್ಯ ಮುಸ್ಲಿಮರು ಸಾಮೂಹಿಕವಾಗಿ ಪಲಾಯನ ನಡೆಸುತ್ತಿರುವ ಬಗ್ಗೆ ಸೂ ಕಿ ನಿರ್ದಿಷ್ಟವಾಗಿ ಹೇಳಲಿಲ್ಲ, ಆದರೆ, ಎಲ್ಲ ನಾಗರಿಕರ ಹಿತ ಕಾಪಾಡಲು ತನ್ನ ಸರಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದಷ್ಟೇ ಹೇಳಿದರು.
‘‘ನಾವು ನಮ್ಮ ನಾಗರಿಕರ ಹಿತಾಸಕ್ತಿಯನ್ನು ಪರಿಗಣಿಸಬೇಕು, ನಮ್ಮ ಪ್ರಜೆಗಳಾಗಲಿ, ಅಲ್ಲದಿರಲಿ ನಮ್ಮ ದೇಶದಲ್ಲಿರುವ ಪ್ರತಿಯೊಬ್ಬರ ಹಿತವನ್ನು ಖಾತರಿಪಡಿಸಬೇಕು’’ ಎಂದು ಎಎನ್‌ಐ ಸುದ್ದಿ ಸಂಸ್ಥೆಗೆ ಸೂ ಕಿ ಹೇಳಿದರು.
‘‘ಖಂಡಿತವಾಗಿಯೂ ನಮ್ಮ ಸಂಪನ್ಮೂಲಗಳು ನಾವು ಬಯಸುವಷ್ಟು ಸಮೃದ್ಧವಾಗಿಲ್ಲ. ಆದಾಗ್ಯೂ, ಪ್ರತಿಯೊಬ್ಬರಿಗೂ ಕಾನೂನಿನ ರಕ್ಷಣೆ ಇದೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ’’ ಎಂದು ಅವರು ಹೇಳಿದರು.