ಸಂಬಂಧ ಹಳಿ ತಪ್ಪದಂತೆ ಭಾರತ, ಚೀನಾ ಖಾತರಿಪಡಿಸುವುದು ಅಗತ್ಯ

Update: 2017-09-07 16:57 GMT

ಬೀಜಿಂಗ್, ಸೆ. 7: ಕಳೆದ ಕೆಲವು ತಿಂಗಳುಗಳಲ್ಲಿ ಬಿರುಕು ಬಿಟ್ಟಿರುವ ತಮ್ಮ ನಡುವಿನ ಸಂಬಂಧವು ಇನ್ನಷ್ಟು ಹದಗೆಡದಂತೆ ಭಾರತ ಮತ್ತು ಚೀನಾಗಳು ಖಾತರಿಪಡಿಸಬೇಕು ಎಂದು ಚೀನಾದ ವಿದೇಶ ಸಚಿವ ವಾಂಗ್ ಯಿ ಗುರುವಾರ ಹೇಳಿದ್ದಾರೆ.

ಚೀನಾ ಮತ್ತು ಪಾಕಿಸ್ತಾನಗಳ ವಿರುದ್ಧ ಎರಡು ಅಲಗಿನ ಯುದ್ಧಕ್ಕೆ ಭಾರತ ಸಿದ್ಧವಾಗಬೇಕು ಎಂಬುದಾಗಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನಿನ್ನೆ ನೀಡಿರುವ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಭಾರತ ಮತ್ತು ಚೀನಾಗಳು ಪರಸ್ಪರರ ಅಭಿವೃದ್ಧಿ ಅವಕಾಶಗಳೇ ಹೊರತು ಬೆದರಿಕೆಗಳಲ್ಲ ಎಂಬ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರ ನಿಲುವನ್ನು ಜನರಲ್ ರಾವತ್ ಗಮನಿಸಬೇಕು ಎಂದು ಅವರು ಹೇಳಿದರು.

‘‘ಕಳೆದ ಕೆಲವು ತಿಂಗಳುಗಳಲ್ಲಿ ಹಲವು ಸ್ಪಷ್ಟ ಕಾರಣಗಳಿಗಾಗಿ ಭಾರತ ಮತ್ತು ಚೀನಾಗಳ ನಡುವಿನ ಸಂಬಂಧ ಹಳಸಿತ್ತು ಹಾಗೂ ದುರ್ಬಲಗೊಂಡಿತ್ತು. ಇದನ್ನು ಹಿಂದೆ ಬಿಟ್ಟು, ಎರಡು ದೇಶಗಳ ನಾಯಕರ ನಡುವೆ ಮೂಡಿದ ಒಮ್ಮತದ ಪ್ರಕಾರ ಉಭಯ ರಾಷ್ಟ್ರಗಳು ಮುಂದುವರಿಯಬೇಕು ಹಾಗೂ ದ್ವಿಪಕ್ಷೀಯ ಸಂಬಂಧಗಳು ಸರಿಯಾದ ಹಾದಿಯಲ್ಲಿವೆ ಎಂಬುದನ್ನು ಖಾತರಿಪಡಿಸಬೇಕು’’ ಎಂದು ವಾಂಗ್ ನುಡಿದರು.

ನೇಪಾಳದ ವಿದೇಶ ಸಚಿವ ಕೃಷ್ಣ ಬಹಾದುರ್ ಮಹಾರವಸ್ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಾಂಗ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಕ್ಸಿಯಾಮೆನ್‌ನಲ್ಲಿ ‘ಬ್ರಿಕ್ಸ್’ ಶೃಂಗಸಭೆಯ ವೇಳೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನಡೆದ ಮಾತುಕತೆಯಲ್ಲಿ ಏರ್ಪಟ್ಟ ಒಮ್ಮತವನ್ನು ಚೀನಾ ವಿದೇಶ ಸಚಿವರು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಚೀನಾ ಮತ್ತು ಭಾರತಗಳ ನಡುವೆ ಇತ್ತೀಚಿಗೆ ಸಿಕ್ಕಿಂನ ಡೋಕಾ ಲ ಗಡಿಯಲ್ಲಿ ಉಂಟಾಗಿರುವ ಸಂಘರ್ಷ ಪರಿಸ್ಥಿತಿಯ ಬಗ್ಗೆ ಜ. ರಾವತ್ ಬುಧವಾರ ಮಾತನಾಡುತ್ತಿದ್ದರು. ಈ ಪರಿಸ್ಥಿತಿ ನಿಧಾನವಾಗಿ ಭಾರತದ ಉತ್ತರದ ಗಡಿಗಳಲ್ಲಿ ಬೃಹತ್ ಸಂಘರ್ಷವಾಗಿ ಬೆಳೆಯಬಹುದು ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News