ದಡಾರ ಲಸಿಕೆಯಲ್ಲಿ ತೀರಾ ಹಿಂದುಳಿದ ಭಾರತ: ವಿಶ್ವಸಂಸ್ಥೆ

Update: 2017-09-07 17:05 GMT

ಮಾಲೆ (ಮಾಲ್ದೀವ್ಸ್), ಸೆ. 7: ದಡಾರ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಇಂಡೋನೇಶ್ಯಗಳು ಭಾರೀ ಹಿಂದುಳಿದಿವೆ; ಈ ರೋಗಕ್ಕೆ ಲಸಿಕೆ ಹಾಕಿಸಿಕೊಳ್ಳದ ಆಗ್ನೇಯ ಏಶ್ಯದ ಮಕ್ಕಳ ಪೈಕಿ 90 ಶೇಕಡಕ್ಕೂ ಅಧಿಕ ಈ ಎರಡು ದೇಶಗಳಲ್ಲಿದ್ದಾರೆ ಎಂದು ವಿಶ್ವಸಂಸ್ಥೆ ಇಂದಿಲ್ಲಿ ಹೇಳಿದೆ.

ತಪ್ಪು ಕಲ್ಪನೆಗಳು ಮತ್ತು ಅಪಪ್ರಚಾರದ ಹಿನ್ನೆಲೆಯಲ್ಲಿ ಲಸಿಕಾ ಅಭಿಯಾನಕ್ಕೆ ತಡೆಯಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

2016ರಲ್ಲಿ ಭಾರತದಲ್ಲಿ 31 ಲಕ್ಷ ಮತ್ತು ಇಂಡೋನೇಶ್ಯದಲ್ಲಿ 11 ಲಕ್ಷ ಮಕ್ಕಳು ದಡಾರ ಲಸಿಕೆ ಹಾಕಿಸಿಕೊಂಡಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯ ಪ್ರಾದೇಶಿಕ ಕಚೇರಿ ತಿಳಿಸಿದೆ.

ಈ ವಲಯದಲ್ಲಿ ಲಸಿಕೆ ಹಾಕಿಸಿಕೊಳ್ಳದ ಮಕ್ಕಳ ಪೈಕಿ 91 ಶೇಕಡ ಮಕ್ಕಳು ಈ ಎರಡು ದೇಶಗಳಲ್ಲಿದ್ದಾರೆ.

ಈ ಎರಡು ದೇಶಗಳಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ಆರೋಗ್ಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ, ಈಗಲೂ ದಡಾರದಿಂದಾಗಿ ಪ್ರತಿ ವರ್ಷ ವಿಶ್ವಾದ್ಯಂತ ಸುಮಾರು 1,34,200 ಮಕ್ಕಳು ಸಾಯುತ್ತಿದ್ದಾರೆ ಹಾಗೂ ಈ ಪೈಕಿ 54,500 ಕ್ಕೂ ಅಧಿಕ ಮಕ್ಕಳು ಆಗ್ನೇಯ ಏಶ್ಯದವರು.

 ‘‘ದಡಾರವನ್ನು ಹೋಗಲಾಡಿಸುವುದಕ್ಕಾಗಿ ಜಾಗತಿಕ ಗುರಿಯನ್ನು ನಿಗದಿಪಡಿಸಲಾಗಿಲ್ಲ ಅಥವಾ ದೊಡ್ಡ ಮೊತ್ತವನ್ನು ನೀಡಲಾಗಿಲ್ಲ. ಹಾಗಾಗಿ, ದೇಶಗಳು, ಅದರಲ್ಲೂ ವಿಶೇಷವಾಗಿ ಭಾರತ ಮತ್ತು ಇಂಡೋನೇಶ್ಯಗಳು ಇದಕ್ಕೆ ನಿಧಿಗಳನ್ನು ನೀಡಬೇಕು. ಇಲ್ಲಿ ಹೆಚ್ಚಿನ ಸಂಖ್ಯೆಯ ಲಸಿಕೆ ತೆಗೆದುಕೊಳ್ಳದ ಮಕ್ಕಳು ವಾಸಿಸುತ್ತಿದ್ದಾರೆ’’ ಎಂದು ವಿಶ್ವಸಂಸ್ಥೆ ಆಗ್ನೇಯ ಏಶ್ಯ ಪ್ರಾದೇಶಿಕ ಕಚೇರಿಯ ಕುಟುಂಬ ಆರೋಗ್ಯ, ಲಿಂಗ ಮತ್ತು ಜೀವನ ವಿಧಾನ ನಿರ್ದೇಶಕ ಡಾ. ಪೆಮ್ ನಮ್‌ಗ್ಯಾಲ್ 70ನೆ ಪ್ರಾದೇಶಿಕ ಸಮಿತಿ ಸಭೆಯ ನೇಪಥ್ಯದಲ್ಲಿ ಪಿಟಿಐಯೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News