×
Ad

ಸರಕಾರಿ ಆಸ್ಪತ್ರೆಯಲ್ಲಿ 90 ಮಕ್ಕಳು ಮೃತ್ಯು: ರಾಜಸ್ತಾನ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್

Update: 2017-09-07 22:54 IST

ಹೊಸದಿಲ್ಲಿ, ಸೆ. 67: ಬನ್ಸ್ವಾರಾ ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತೆಯಲ್ಲಿ ಕಳೆದ ಎರಡು ತಿಂಗಳಲ್ಲಿ 90 ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ರಾಜಸ್ತಾನ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ ಹಾಗೂ ನಾಲ್ಕು ವಾರ ಗಳೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದೆ.

ಆಸ್ಪತ್ರೆಯ ಅಸಮರ್ಪಕ ಮೇಲ್ವಿಚಾರಣೆ ಹಾಗೂ ಸೌಲಭ್ಯ ಕೊರತೆಯ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕು ಆಯೋಗ, ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಕ್ಕಳ ಬದುಕುವ ಹಕ್ಕಿನ ಉಲ್ಲಂಘನೆ ನಡೆದಿದೆ ಎಂದರು.

ರಾಜಸ್ಥಾನ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿರುವ ರಾಷ್ಟ್ರೀಯ ಮಾನವ ಹಕ್ಕು ಆಯೋಗ, ಆಸ್ಪತ್ರೆಯ ಪರಿಸ್ಥಿತಿ ಸುಧಾರಿಸಲು ಅಳವಡಿಸಿಕೊಳ್ಳಬೇಕಾಗಿರುವ ಪ್ರಸ್ತಾಪ ಹಾಗೂ ತೆಗೆದುಕೊಳ್ಳಲಾದ ಕ್ರಮಗಳನ್ನು ಉಲ್ಲೇಖಿಸಿ ತಿಂಗಳೊಳಗೆ ವರದಿ ಸಲ್ಲಿಸುವಂತೆ ತಿಳಿಸಿದೆ.

  ಮಾನವನ ತಪ್ಪು ಹಾಗೂ ನಿರ್ಲಕ್ಷ್ಯದಿಂದ ಸಂಭವಿಸುವ ಇಂತಹ ಸಾವುಗಳನ್ನು ತಡೆಯುವ ಹಿನ್ನೆಲೆಯಲ್ಲಿ ಜಾಗರೂಕರಾಗಿರಲು ಆಸ್ಪತ್ರೆ ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಅರಿವು ನೀಡಲು ಇತ್ತೀಚೆಗೆ ಯಾವುದಾದರೂ ಸೂಚನೆ ನೀಡಲಾಗಿದೆಯೋ ಎಂಬ ಬಗ್ಗೆ ಮಾಹಿತಿ ನೀಡುವಂತೆ ಕೂಡ ತಿಳಿಸಲಾಗಿದೆ ಎಂದು ಎನ್‌ಎಚ್‌ಆರ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.

 ಬನ್ಸ್ವಾರದ ಎಂ.ಜಿ. ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳಲ್ಲಿ 90 ಮಕ್ಕಳು ಸಾವನ್ನಪ್ಪಿದ ಬಳಿಕ ರಾಜ್ಯ ಸರಕಾರ ತನಿಖೆಗೆ ಆದೇಶಿಸಿತ್ತು.

 ಹಲವು ಮಕ್ಕಳು ಜನನ ಸಂದರ್ಭದ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಈ ಕಾರಣಕ್ಕೆ ಮೃತಪಟ್ಟ ಮಕ್ಕಳ ಸಂಖ್ಯೆ ಎಷ್ಟು ಎಂಬುದು ತನಿಖೆ ಬಳಿಕ ತಿಳಿಯಲಿದೆ ಎಂದು ಬನ್ಸ್ವಾರದ ಮುಖ್ಯ ವೈದ್ಯಕೀಯ ಅಧಿಕಾರಿ ಹಾಗೂ ಆರೋಗ್ಯಾಧಿಕಾರಿ ಡಾ. ಎಚ್.ಎಲ್. ತಬಿಯಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News