ಶಬ್ದ ಮಾಲಿನ್ಯದ ಆದೇಶ ಅನುಸರಣೆಯಾಗುತ್ತಿಲ್ಲ: ಮುಂಬೈ ಹೈಕೋರ್ಟ್

Update: 2017-09-07 17:40 GMT

ಮುಂಬೈ, ಸೆ. 7: ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ಹಲವು ಆದೇಶಗಳು ಅನುಸರಣೆ ಆಗುತ್ತಿಲ್ಲ ಎಂದು ಪ್ರತಿಪಾದಿಸಿರುವ ಮುಂಬೈ ಉಚ್ಚ ನ್ಯಾಯಾಲಯ, ಮಹಾರಾಷ್ಟ್ರ ಸರಕಾರ ಈ ವಿಷಯವನ್ನು ವಿರೋಧದ ರೀತಿಯಲ್ಲಿ ಪರಿಗಣಿಸುವುದನ್ನು ನಿಲ್ಲಿಸಬೇಕು ಎಂದಿದೆ.

ಶಬ್ದ ಮಾಲಿನ್ಯ ಕಾಯ್ದೆ-2000ದ ನಿಬಂಧನೆಗಳಿಗೆ ಅನುಸಾರವಾಗಿ ಹಲವು ಆದೇಶಗಳನ್ನು ಅನುಷ್ಠಾನಗೊಳಿಸುವಂತೆ ಕಳೆದ ಹಲವು ವರ್ಷಗಳಿಂದ ಸರಕಾರಕ್ಕೆ ಆದೇಶಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

 ಉತ್ಸವ ಹಾಗೂ ಇತರ ಕಾರ್ಯಕ್ರಮಗಳ ಸಂದರ್ಭ ಶಬ್ದದ ಮಟ್ಟ ದಾಖಲಿಸಿಕೊಳ್ಳಲು ಪ್ರತಿ ಪೊಲೀಸ್ ಠಾಣೆ ಡೆಸಿಬಲ್ ಮೀಟರ್ ಹೊಂದುವುದು ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ಕೂಡ ಈ ಆದೇಶ ಒಳಗೊಂಡಿದೆ.

ಗಣೇಶೋತ್ಸವ ಹಾಗೂ ಇತರ ಕಾರ್ಯಕ್ರಮಗಳಿಗಾಗಿ ರಚಿಸುವ ಅನಧಿಕೃತ ಪೆಂಡಾಲ್‌ಗಳನ್ನು ಪರಿಶೀಲಿಸುವಂತೆ ಹಾಗೂ ನಾಗರಿಕ ಅಧಿಕಾರಿಗಳಿಗೆ ವರದಿ ನೀಡುವಂತೆ ಉಚ್ಚ ನ್ಯಾಯಾಲಯ ಕಂದಾಯ ಇಲಾಖೆಗೆ ನಿರ್ದೇಶಿಸಿದೆ.

 ಶಬ್ದ ಮಾಲಿನ್ಯದ ಕುರಿತು ದೂರು ದಾಖಲಿಸಲು ಸಹಾಯವಾಣಿ ಹಾಗೂ ವೆಬ್‌ಸೈಟ್ ರೂಪಿಸುವಂತೆ ಕೂಡ ನ್ಯಾಯಾಲಯ ಆದೇಶಿಸಿದೆ.

 ನಾವು ಆದೇಶಗಳಲ್ಲಿ ನೀಡುವ ಹಲವು ನಿರ್ದೇಶನಗಳನ್ನು ಅನುಸರಿಸದೇ ಇರುವುದು ನಮ್ಮ ಗಮನಕ್ಕೆ ಬಂದಿದೆ. ಯಾವ ನಿರ್ದೇಶನಗಳೂ ನಿಜವಾದ ಅರ್ಥದಲ್ಲಿ ಅನುಸರಣೆ ಆಗುತ್ತಿಲ್ಲ. ಪ್ರತಿಯೊಂದು ನಿರ್ದೇಶನವೂ ಕಾಗದದಲ್ಲಿ ಮಾತ್ರ ಇದೆ. ರಾಜ್ಯ ಸರಕಾರ ಈ ವಿಚಾರವನ್ನು ವಿರೋಧಾಭಾಸವಾಗಿ ಯಾಕೆ ಪರಿಗಣಿಸುತ್ತದೆ ಎಂಬುದು ನಮಗೆ ಅರ್ಥ ಆಗುತ್ತಿಲ್ಲ ಎಂದು ಮುಂಬೈ ಉಚ್ಚ ನ್ಯಾಯಾಲಯ ಹೇಳಿದೆ.

ನಮ್ಮ ಆದೇಶಕ್ಕೆ ನೀವು ಅಗೌರವ ತೋರಿಸಬಹುದು. ಆದರೆ, ಅದನ್ನು ಇನ್ನೂ ಅನುಸರಿಸಲೇ ಬೇಕು ಎಂದು ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News