×
Ad

ಪತ್ರಕರ್ತನ ಬಂಧನ, ಚಾನೆಲ್‌ ವರದಿಗಾರನ ಮೇಲೆ ಹಲ್ಲೆ ಖಂಡಿಸಿ ದ.ಕ. ಜಿಲ್ಲಾ ಪತ್ರಕರ್ತರ ಸಂಘ ಮನವಿ

Update: 2017-09-08 18:30 IST

ಮಂಗಳೂರು, ಸೆ.8: ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಪತ್ರಕರ್ತ ಇಮ್ತಿಯಾಝ್ ಷಾ ತುಂಬೆ ಅವರ ಬಂಧನ ಮತ್ತು ಮಂಗಳೂರು ಚಲೋ ಕಾರ್ಯಕ್ರಮದ ವರದಿಗೆ ತೆರಳಿದ್ದ ವಿ4 ಚಾನೆಲ್‌ನ ವರದಿಗಾರ ಮೂಸಾ ಕಲೀಂ ಹಾಗು ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಕ್ಯಾಮರಾಮೆನ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶುಕ್ರವಾರ ದ.ಕ. ಜಿಲ್ಲಾಧಿಕಾರಿ, ಪಶ್ಚಿಮ ವಲಯ ಐಜಿಪಿಗೆ ಮನವಿ ಸಲ್ಲಿಸಿದೆ.

ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ತಕ್ಷಣ ಪೊಲೀಸರು ಇಂತಹ ವರದಿಗಾರ ವರದಿ ಮಾಡಿದ್ದಾರೆ ಎಂಬ ಗುಮಾನಿಯ ಮೇರೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿರುವುದು ಖಂಡನೀಯ. ಪೊಲೀಸರು ತಮ್ಮ ತಪ್ಪನ್ನು ಮರೆಮಾಚಲು ಅಥವಾ ಪತ್ರಕರ್ತರ ಬಾಯಿ ಮುಚ್ಚಿಸಲು ಈ ಕ್ರಮ ಕೈಗೊಂಡಂತಿದೆ. ಪತ್ರಕರ್ತರಿಗೆ ರಕ್ಷಣೆ ನೀಡಬೇಕಾದ ಪೊಲೀಸರೇ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ಅಲ್ಲದೆ ಕರ್ತವ್ಯನಿರತ ಪತ್ರಕರ್ತರಿಗೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪತ್ರಕರ್ತರ ಸಂಘದ ನಿಯೋಗದಲ್ಲಿ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಉಪಾಧ್ಯಕ್ಷ ಸುಕೇಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿಕಾರಿ ಇಬ್ರಾಹೀಂ ಅಡ್ಕಸ್ಥಳ, ಹಿರಿಯ ಪತ್ರಕರ್ತರಾದ ತಾರನಾಥ ಕಾಪಿಕಾಡ್, ಪುಷ್ಪರಾಜ್ ಬಿ.ಎನ್., ಚಂದ್ರಶೇಖರ್, ಇರ್ಷಾದ್,  ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಪಿ.ಎಂ.ಎ. ಅಶ್ರಫ್ ಪಾಣೆಮಂಗಳೂರು, ಅಬ್ದುಲ್ ರಹ್ಮಾನ್ ಮುಲ್ಕಿ, ರೇಮಂಡ್ ಡಿಕುನ್ಹಾ, ಕರ್ನಾಟಕ ಪತ್ರಕರ್ತರ ಸಂಘದ ದ.ಕ. ಘಟಕ ಅಧ್ಯಕ್ಷ ಸುದೇಶ್ ಕುಮಾರ್,ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಮತ್ತಿತರರು ಪಾಲ್ಗೊಂಡಿದ್ದರು.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News