ನದಿಗೆ ಬಿದ್ದು ಯುವತಿ ನೀರುಪಾಲು: ಪತ್ತೆಗೆ ಮನವಿ
ಮಂಗಳೂರು, ಸೆ. 8: ಪುತ್ತೂರು ತಾಲೂಕು ಕಡಬ ಸಮೀಪದ ಕೋಡಿಂಬಾಳದಲ್ಲಿ ಚಲಿಸುತ್ತಿದ್ದ ರೈಲಿನಿಂದ ಯವತಿಯೋರ್ವಳು ನದಿಗೆ ಬಿದ್ದು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪತ್ನಿಯನ್ನು ಪತ್ತೆ ಹಚ್ಚುವಂತೆ ಆಕೆಯ ಪತಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಂಜನಗೂಡು ನಿವಾಸಿ ಅಂಬಿಕಾ (23) ಅವರು ಚಲಿಸುತ್ತಿದ್ದ ರೈಲಿನಿಂದ ಕುಮಾರಧಾರ ನದಿಗೆ ಬಿದ್ದು ನಾಪತ್ತೆಯಾಗಿದ್ದಾರೆ. ಅಂಬಿಕಾ ಅವರು ತನ್ನ ಪತಿಯ ಪರಿಚಯದ ಅವಿನಾಶ್ ಎಂಬಾತಮ ಜತೆಗೆ ಮಂಗಳೂರಿಗೆ ಬರಲು ಮೈಸೂರಿನಲ್ಲಿ ಸೆ.4 ರಂದು ಬೆಂಗಳೂರು-ಮಂಗಳೂರು ರಾತ್ರಿ ರೈಲು ಏರಿದ್ದರು. ಕೋಡಿಂಬಾಳ ಸಮೀಪದ ನಾಕೂರು ರೈಲ್ವೆ ಸೇತುವೆಯಲ್ಲಿ ಸಂಚರಿಸುತ್ತಿರುವಾಗ ರೈಲು ಗಾಡಿಯಿಂದ ಆಕೆ ಬಿದ್ದಿರುವುದಾಗಿ ಅವಿನಾಶ್ ತನ್ನ ಮೊಬೈಲ್‌ಗೆ ಕರೆ ಮಾಡಿ ತಿಳಿಸಿದ್ದು ಅದರಂತೆ ಘಟನಾ ಸ್ಥಳಕ್ಕೆ ಬಂದು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಎಂದು ಆಕೆಯ ಪತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅಂಬಿಕಾ ಅವರು ಆಕಾಶ ನೀಲಿ ಬಣ್ಣದ ಚೂಡಿದಾರ ಧರಿಸಿದ್ದು, ಎಡಕೈ ಬೆರಳಲ್ಲಿ ಬೆಳ್ಳಿ ಉಂಗುರ ಬಲಗೈಯಲ್ಲಿ ಹಿತ್ತಾಳೆಯ ಕಡಗ, ಕಾಲಿನಲ್ಲಿ ನೀಲಿ ಮತ್ತು ಕಪ್ಪು ಬಣ್ಣದ ಸಾಕ್ಸ್ ಧರಿಸಿ ಬೆಲ್ಟ್ ಚಪ್ಪಲ್ ಧರಿಸಿದ್ದಾರೆ. ಈಕೆ ಪತ್ತೆಯಾದಲ್ಲಿ ಮಂಗಳೂರು ರೈಲ್ಲೆ ಪೊಲೀಸರಿಗೆ 0824-2220559 ಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಯವರು ಕೋರಿದ್ದಾರೆ. ರೈಲ್ವೇ ಪೊಲೀಸರು ಆಕೆ ನದಿಗೆ ಹಾರಿದ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.