ವಾರ್ತಾಭಾರತಿ ವರದಿಗಾರನ ಬಂಧನ ಖೇದಕರ: ಸಚಿವ ಯು.ಟಿ.ಖಾದರ್
ಮಂಗಳೂರು, ಸೆ. 8: ವಾರ್ತಾಭಾರತಿಯ ಬಂಟ್ವಾಳದ ವರದಿಗಾರನನ್ನು ಪೊಲೀಸರು ಬಂಧಿಸಿದ್ದು ಖಂಡನೀಯ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದೆ. ಈ ಬಗ್ಗೆ ಸೂಕ್ತ ತನಿಖೆಯನ್ನು ಸರಕಾರ ನಡೆಸಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ.ಖಾದರ್ ಅವರು ಶುಕ್ರವಾರ ಹೇಳಿಕೆ ನೀಡಿದ್ದಾರೆ.
ಗುರುವಾರ ರಾತ್ರಿ ತನಗೆ ವಾರ್ತಾಭಾರತಿಯಿಂದ ವರದಿಗಾರನನ್ನು ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ನೀಡಿದಾಗ ತಕ್ಷಣ ಮಂಗಳೂರು ಎಸ್ಪಿಗೆ ಫೋನ್ ಮಾಡಿ ವಿಚಾರಿಸಿದೆ. ಎಸ್ಪಿಯವರು ವಾರ್ತಾಭಾರತಿಯ ತಪ್ಪೇನೂ ಇಲ್ಲ. ವರದಿಗಾರನನ್ನು ವೈಯಕ್ತಿಕವಾಗಿ ಬಂಧಿಸಲಾಗಿದೆ. ವಿಚಾರಣೆ ನಡೆಸಿ ಬಿಡುತ್ತೇವೆ ಎಂದು ಹೇಳಿದರು. ಆ ಮಾಹಿತಿಯನ್ನು ಪುನಃ ವಾರ್ತಾಭಾರತಿಯ ಸಂಬಂಧಿಸಿದವರಿಗೆ ತಿಳಿಸಿದ್ದೆ. ಆದರೂ ಕೂಡಾ ಬಂಧನವಾಗಿದೆ ಎಂಬ ಸುದ್ದಿ ಸಿಕ್ಕಾಗ ಆಶ್ಚರ್ಯವಾಯಿತು. ವರದಿಗಾರನ ಬಂಧನದ ಕುರಿತು ನನ್ನ ಹೆಸರಲ್ಲಿ ವಾರ್ತಾಭಾರತಿಯಲ್ಲಿ ಪ್ರಕಟವಾದದ್ದು ನನ್ನ ವೈಯಕ್ತಿಕ ಅಭಿಪ್ರಾಯವಲ್ಲ ಎಂದು ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ವರದಿಗಾರನನ್ನು ಬಂಧಿಸಿರುವ ಬಗ್ಗೆ ನನಗೂ ನೋವಿದೆ. ಮಾತ್ರವಲ್ಲ ಆಶ್ಚರ್ಯವಾಗಿದೆ. ತಪ್ಪಿತಸ್ಥರ ವಿರುದ್ಧ ಸರಕಾರ ತನಿಖೆ ನಡೆಸಿ ಶೋಷಿತರಿಗೆ ನ್ಯಾಯ ಒದಗಿಸಿಕೊಡಲಾಗುವುದು. ಈ ಕುರಿತು ವಾರ್ತಾ ಇಲಾಖೆಗೂ ಮಾಹಿತಿ ನೀಡುತ್ತೇನೆ. ಪತ್ರಿಕಾ ಧರ್ಮವನ್ನು ದಮನಿಸುವ ಕಾರ್ಯ ಯಾರೇ ಮಾಡಿದರೂ ಅದರ ವಿರುದ್ಧ ನಾನು ಸದಾ ಧ್ವನಿ ಎತ್ತುವೆ. ಇದೀಗ ವಾರ್ತಾಭಾರತಿಯ ವರದಿಗಾರನ ವಿರುದ್ಧ ನಡೆದ ಘಟನೆ ಕೂಡಾ ಖಂಡನೀಯ ಎಂದು ಯು.ಟಿ.ಖಾದರ್ ಹೇಳಿದರು.