ಪೊಲೀಸ್ ಭಯೋತ್ಪಾದನೆ ಹಾಗೂ ಅಮಾನವೀಯ ಕೃತ್ಯ: ದಲಿತ ಚಿಂತಕ ಜಯನ್ ಮಲ್ಪೆ

Update: 2017-09-10 13:40 GMT

"ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ಸಲುವಾಗಿ ಪತ್ರಿಕೆಗಳು ಮಾಡುತ್ತಿರುವ ಹೋರಾಟ ಹಾಗೂ ಸಾಮಾಜಿಕ ಸೇವೆಗೆ ಒಂದು ಹೊಸರೂಪವನ್ನು ತಂದು ಕೊಟ್ಟಿದ್ದು 'ವಾರ್ತಾಭಾರತಿ'. ನೊಂದವರ ಪರವಾಗಿ ಹಾಗೂ ಪ್ರಜಾಪ್ರಭುತ್ವದ ಸಾರ್ವಭೌಮತೆಗಾಗಿ ಅಸ್ತಿತ್ವಕ್ಕೆ ಬಂದ ಈ ಮಾಧ್ಯಮದ ಬಂಟ್ವಾಳ ವರದಿಗಾರ ಇಮ್ತಿಯಾಝ್‍ರ ಬಂಧನವು ಪೊಲೀಸ್ ಭಯೋತ್ಪಾದನೆ ಹಾಗೂ ಅಮಾನವೀಯವಾಗಿದೆ" ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ. 

"ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಎನ್ನುವಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ನಡೆದುಕೊಂಡಿದ್ದಾರೆ. ನಿಷ್ಪಕ್ಷಪಾತ ವರದಿಯನ್ನು ನೀಡುವುದು ಪತ್ರಿಕೆಯ ಕೆಲಸ. ಶರತ್ ಮಡಿವಾಳ ಕೊಲೆ ಪ್ರಕರಣ ಸಂಬಂಧ ಆರೋಪಿಯೊಬ್ಬನ ಮನೆಗೆ ಪೊಲೀಸರು ದಾಳಿ ನಡೆಸಿದ ಬಗ್ಗೆ ವರದಿ ಮಾಡಿದ್ದನ್ನೇ ತಪ್ಪು ಎಂಬಂತೆ ಬಿಂಬಿಸಿ, ಪೊಲೀಸರು ಇಮ್ತಿಯಾಝ್‍ನನ್ನು ಬಂಧಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಬಲಾತ್ಕಾರವಾಗಿದೆ" ಎಂದವರು ಹೇಳಿದ್ದಾರೆ.

"ಅನ್ಯಾಯದ ಬಗ್ಗೆ ವರದಿ ಮಾಡುವುದು ಕಾನೂನು ಬಾಹಿರ ಎಂದು ಭಾವಿಸುವುದಾದರೆ, ಈ ರಾಜ್ಯದಲ್ಲಿ ಪ್ರಜಾರಾಜ್ಯವಿದೆಯೋ ಅಥವಾ ಪೊಲೀಸ್ ರಾಜ್ಯವಿದೆಯೋ ಎಂದು ಕೇಳಬೇಕಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯವೆನ್ನುವುದು ಜನರ ಸ್ವಾತಂತ್ರ್ಯವಿದ್ದ ಹಾಗೆ. ಪತ್ರಕರ್ತನ ಬಂಧನ ಎಂದರೆ ಅದು ಜನಸಾಮಾನ್ಯರನ್ನು ಬಂಧಿಸಿದಂತೆ. ಆದ್ದರಿಂದ ಸರಕಾರೇತರ ಸಂಸ್ಥೆಗಳು, ಮಾನವ ಹಕ್ಕು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು,ದಲಿತ ಒಕ್ಕೂಟಗಳು ಹಾಗೂ ಪ್ರಜ್ಞಾವಂತರು ಇಂದು 'ವಾರ್ತಾಭಾರತಿ'ಯ ವರದಿಗಾರ ಇಮ್ತಿಯಾಝ್‍ ರ ಪರ ಹೋರಾಡುವ ಮೂಲಕ ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕಾಗಿದೆ" ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News