ಶಾಲೆಗೆ ಹಾಜರಾಗಲು ಮಕ್ಕಳು ಮೂರು ಕಿ.ಮೀ.ನಡೆಯಬೇಕೇ?
ಹೊಸದಿಲ್ಲಿ,ಸೆ.10: ಶಾಲೆಗೆ ಹಾಜರಾಗಲು ಮಕ್ಕಳು ಮೂರು ಕಿಮೀ. ಅಥವಾ ಹೆಚ್ಚಿನ ದೂರವನ್ನು ನಡೆಯಬೇಕೇ ಎಂದು ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯವು, ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಣದ ಹಕ್ಕನ್ನು ಅರ್ಥಪೂರ್ಣವಾಗಿಸಲು ಹಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳಾಗಬೇಕಿವೆ. ಕೇವಲ ಶಾಲೆಗೆ ಹಾಜರಾಗಲೆಂದೇ ಮಕ್ಕಳು ಇಷ್ಟು ದೂರ ನಡೆಯುವಂತಾಗಬಾರದು ಎಂದು ಹೇಳಿದೆ.
ದೇಶದಲ್ಲಿಯೇ ಅತ್ಯಂತ ಹೆಚ್ಚು ಸಾಕ್ಷರ ರಾಜ್ಯವಾಗಿರುವ ಕೇರಳದ ಶಾಲೆಯೊಂದನ್ನು ಮೇಲ್ದರ್ಜೆಗೇರಿಸಲು ನೀಡಲಾಗಿರುವ ಅನುಮತಿಯನ್ನು ಸಮೀಪದ ಇನ್ನೊಂದು ಶಾಲೆಯು ವಿರೋಧಿಸಿದ್ದು, ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ.
ಪರಪ್ಪನಂಗಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯನ್ನು ಮುಗಿಸಿದ ಮಕ್ಕಳು ಮುಂದಿನ ವಿದ್ಯಾಭ್ಯಾಸಕ್ಕಾಗಿ 3-4 ಕಿ.ಮೀ.ಗಳಷ್ಟು ದೂರ ಹೋಗಬೇಕಿದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಎಂ.ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರ ಪೀಠವು, 10ರಿಂದ 14 ವರ್ಷದ ಮಕ್ಕಳು ಶಾಲೆಗೆ ಹಾಜರಾಗಲು 3-4 ಕಿ.ಮೀ.ನಡೆಯಬೇಕೆಂದು ನಾವು ನಿರೀಕ್ಷಿಸುವುದಿಲ್ಲ. ಶಿಕ್ಷಣದ ಹಕ್ಕು ಈಗ ಸಂವಿಧಾನದ 21ಎ ವಿಧಿಯಡಿ ಮೂಲಭೂತ ಹಕ್ಕು ಆಗಿದೆ ಮತ್ತು ಇದನ್ನು ಅರ್ಥಪೂರ್ಣವಾಗಿಸಬೇಕಾದರೆ ಮಕ್ಕಳು ಹೆಚ್ಚು ದೂರ ತೆರಳದಂತಿರಲು ಹಿರಿಯ ಪ್ರಾಥಮಿಕ ಶಾಲೆಗಳನ್ನು ಹೆಚ್ಚ್ಚಾಗಿ ಸ್ಥಾಪಿಸಬೇಕು ಎಂದು ಹೇಳಿತು.