ಸಂತ ಪದವಿಗೆ ಮಾನದಂಡ: ಆಖಾಡ ಪರಿಷದ್ ನಿರ್ಧಾರ
ಹೊಸದಿಲ್ಲಿ, ಸೆ.10: ‘ಸಂತ’ ಪದವಿಯನ್ನು ಗುರ್ಮೀತ್ ಸಿಂಗ್‌ರಂತ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಖಿಲ ಭಾರತೀಯ ಅಖಾಡ ಪರಿಷದ್ ನಿರ್ಧರಿಸಿದೆ.
ಒಂದಿಬ್ಬರು ಧಾರ್ಮಿಕ ಮುಖಂಡರು ನಡೆಸುವ ಕೆಟ್ಟ ಕೆಲಸಗಳಿಂದ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಬಲವಾದ ಭಾವನೆ ಈಗ ಸಂತರಲ್ಲಿ ಮೂಡಿದೆ ಎಂದು ವಿಶ್ವ ಹಿಂದೂ ಪರಿಷದ್(ವಿಹಿಂಪ) ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ತಿಳಿಸಿದ್ದಾರೆ. ವಿಎಚ್‌ಪಿಯು ಅಖಿಲ ಭಾರತೀಯ ಅಖಾಡ ಪರಿಷದ್‌ನ ನಿಕಟಸಂಪರ್ಕದಲ್ಲಿರುವ ಸಂಸ್ಥೆಯಾಗಿದೆ.
ಹಿಂದೂ ಸಾಧು ಹಾಗೂ ಸಂತರ ಅತ್ಯುನ್ನತ ಸಂಘಟನೆಯಾಗಿರುವ ಅಖಿಲ ಭಾರತೀಯ ಅಖಾಡ ಪರಿಷದ್, ನಿರ್ಮೋಹಿ ಅಖಾಡ ಸೇರಿದಂತೆ 14 ಅಖಾಡ ಪರಿಷದ್‌ಗಳ ಒಕ್ಕೂಟವಾಗಿದೆ.
ಸಂತ ಪದವಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾರಣ ಈ ಪದವಿಗೆ ಒಂದು ಮಾನದಂಡ ಗೊತ್ತುಪಡಿಸಬೇಕು ಎಂದು ಅಖಾಡ ಪರಿಷದ್ ಭಾವಿಸಿದೆ. ಇನ್ನು ಮುಂದೆ ಓರ್ವ ವ್ಯಕ್ತಿಯ ನಡವಳಿಕೆ, ಜೀವನಕ್ರಮ ಮುಂತಾದವುಗಳನ್ನು ಪರಿಶೀಲನೆ ನಡೆಸಿದ ಬಳಿಕ ಸಂತ ಪದವಿಯನ್ನು ಘೋಷಿಸಲು ಅಖಾಡ ಪರಿಷದ್ ನಿರ್ಧರಿಸಿದೆ ಎಂದು ಜೈನ್ ತಿಳಿಸಿದ್ದಾರೆ. ಅಲ್ಲದೆ ಜನತೆ ಓರ್ವ ಧಾರ್ಮಿಕ ಮುಖಂಡನ ಅನುಯಾಯಿಗಳಾಗುವ ಮೊದಲು ಆ ವ್ಯಕ್ತಿಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದವರು ತಿಳಿಸಿದ್ದಾರೆ.
ಸಂತ ಎಂದು ಕರೆಸಿಕೊಳ್ಳುವ ವ್ಯಕ್ತಿ ತನ್ನ ಹೆಸರಲ್ಲಿ ಯಾವುದೇ ಆಸ್ತಿಯನ್ನು ಹೊಂದಿರಬಾರದು ಹಾಗೂ ಈತನ ಬಳಿ ಹಣ ಕೂಡಾ ಇರಬಾರದು. ಆಸ್ತಿ ಮತ್ತು ಹಣ ಟ್ರಸ್ಟ್‌ನ ಹೆಸರಲ್ಲಿರಬೇಕು ಹಾಗೂ ಇದನ್ನು ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಬಳಸಬೇಕು ಎಂದು ಅಖಾಡ ಪರಿಷದ್‌ನ ಹಿರಿಯ ಪದಾಧಿಕಾರಿ ತಿಳಿಸಿದ್ದಾರೆ.