×
Ad

ನಾಳೆಯಿಂದ ಕಾರುಗಳಿಗೆ ಜಿಎಸ್‌ಟಿ ಸೆಸ್ ಹೆಚ್ಚಳ ಜಾರಿ

Update: 2017-09-10 20:30 IST

ಹೊಸದಿಲ್ಲಿ,ಸೆ.10: ಮಧ್ಯಮ ಗಾತ್ರದ, ಐಷಾರಾಮಿ ಮತ್ತು ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿಸಲಾಗಿರುವ ಜಿಎಸ್‌ಟಿ ಸೆಸ್ ಸೋಮವಾರದಿಂದ ಜಾರಿಗೆ ಬರಲಿದೆ.

ಮಧ್ಯಮ ಗಾತ್ರದ ಕಾರುಗಳ ಮೇಲಿನ ಸೆಸ್ ಅನ್ನು ಶೇ.2ರಷ್ಟು ಹೆಚ್ಚಿಸಲು ಜಿಎಸ್‌ಟಿ ಮಂಡಳಿಯು ಸೆ.9ರಂದು ನಿರ್ಧರಿಸಿದ್ದು, ಇದರಿಂದಾಗಿ ಪರಿಣಾಮಕಾರಿ ಜಿಎಸ್‌ಟಿ ದರ ಶೇ.45ರಷ್ಟಾಗಲಿದೆ.

 ಇದೇ ರೀತಿ ದೊಡ್ಡ ಗಾತ್ರದ ಕಾರುಗಳ ಮೇಲಿನ ಸೆಸ್ ಅನ್ನು ಶೇ.5ರಷ್ಟು ಮತ್ತು ಎಸ್‌ಯುವಿಗಳ ಮೇಲಿನ ಸೆಸ್ ಅನ್ನು ಶೇ.7ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಪರಿಣಾಮವಾಗಿ ಇವುಗಳ ಮೇಲಿನ ಜಿಎಸ್‌ಟಿ ಅನುಕ್ರಮವಾಗಿ ಶೇ.48 ಮತ್ತು ಶೇ.50ಕ್ಕೆ ಹೆಚ್ಚಳವಾಗಲಿವೆ.

ಈ ಸಂಬಂಧ ಅಧಿಸೂಚನೆಯನ್ನು 2017,ಸೆ.11ರಂದು ಹೊರಡಿಸಲಾಗುತ್ತಿದ್ದು, ಅಂದಿನಿಂದಲೇ ಸೆಸ್ ಏರಿಕೆ ಜಾರಿಗೊಳ್ಳಲಿದೆ ಎಂದು ಕೇಂದ್ರೀಯ ಅಬಕಾರಿ ಮತ್ತು ಸೀಮಾಶುಲ್ಕ ಮಂಡಳಿಯು ರವಿವಾರ ಟ್ವೀಟಿಸಿದೆ.

ಶನಿವಾರ ಕೈಗೊಳ್ಳಲಾದ ಸೆಸ್ ಪರಿಷ್ಕರಣೆಯಲ್ಲಿ ಸಣ್ಣ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು, ಹೈಬ್ರಿಡ್ ಕಾರುಗಳು ಮತ್ತು 13 ಸೀಟ್‌ಗಳ ವಾಹನಗಳ ಮೇಲಿನ ಸೆಸ್ ಅನ್ನು ಹೆಚ್ಚಿಸಲಾಗಿಲ್ಲ.

ಜುಲೈ 1ರಿಂದ ಜಾರಿಗೊಂಡಿರುವ ಜಿಎಸ್‌ಟಿ ವ್ಯವಸ್ಥೆಯಡಿ ಕಾರುಗಳಿಗೆ ಶೇ.28 ತೆರಿಗೆ ಮತ್ತು ಸೆಸ್ ವಿಧಿಸಲಾಗಿದೆ. ಸೆಸ್ ಅನ್ನು ಶೇ.15ರಿಂದ ಶೇ.25ರವರೆಗೆ ಹೆಚ್ಚಿಸಲು ಕಳೆದ ವಾರ ಅಧ್ಯಾದೇಶವನ್ನು ಹೊರಡಿಸಲಾಗಿತ್ತು. ಜಿಎಸ್‌ಟಿ ಮಂಡಳಿಯು ಶನಿವಾರ ಹೈದರಾಬಾದ್‌ನಲ್ಲಿ ನಡೆದ ತನ್ನ 21ನೇ ಸಭೆಯಲ್ಲಿ ವಿವಿಧ ವರ್ಗಗಳ ಕಾರುಗಳ ಮೇಲಿನ ಸೆಸ್ ಏರಿಕೆ ಪ್ರಮಾಣವನ್ನು ನಿಗದಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News