ಪ್ರಾಪ್ತ ವಯಸ್ಕ ಮಕ್ಕಳಿಗೂ ಆರ್ಥಿಕ ನೆರವು ಒದಗಿಸುತ್ತಿರುವ ಪೋಷಕರು: ಜಾಗತಿಕ ಸಮೀಕ್ಷಾ ವರದಿ
ಮುಂಬೈ, ಸೆ.10: ಶೇ.50ರಷ್ಟು ಪೋಷಕರು ತಮ್ಮ ಮಕ್ಕಳು 18 ವರ್ಷ ದಾಟಿದರೂ ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ಭಾರತವೂ ಸೇರಿದಂತೆ ಜಾಗತಿಕವಾಗಿ ನಡೆಸಲಾದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
‘ಭವಿಷ್ಯವನ್ನು ಎದುರಿಸುವುದು’ ಎಂಬ ಬಗ್ಗೆ ಎಚ್‌ಎಸ್‌ಬಿಸಿ ನಡೆಸಿದ ಜಾಗತಿಕ ಮಟ್ಟದ ಸಮೀಕ್ಷೆಯಲ್ಲಿ , ತಮ್ಮ ಮಕ್ಕಳು 18 ವರ್ಷ ದಾಟಿದರೂ ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ಪೋಷಕರ ಪ್ರಮಾಣ ಮಧ್ಯಪ್ರಾಚ್ಯ ಮತ್ತು ಏಶ್ಯ ದೇಶಗಳಲ್ಲಿ ಹೆಚ್ಚಿದೆ. ಯುರೋಪ್ ಮತ್ತು ಅಮೆರಿಕದಲ್ಲಿ ಈ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ. ಯುಎಇಯಲ್ಲಿ ಈ ಪ್ರಮಾಣ ಶೇ.79 ಆಗಿದ್ದು ಅಗ್ರಸ್ಥಾನದಲ್ಲಿದ್ದರೆ, ಇಂಡೊನೇಶಿಯ ಶೇ.77, ಮೆಕ್ಸಿಕೊ ಶೇ.59, ಮಲೇಶ್ಯ ಶೇ.57, ಚೀನ ಶೇ.55, ಭಾರತ ಶೇ.55 ಆಗಿದೆ.
ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಕ್ರಮವಾಗಿ ಶೇ.30 ಮತ್ತು ಶೇ.26 ಆಗಿದೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಅರ್ಜೆಂಟೀನ, ಚೀನ, ಫ್ರಾನ್ಸ್, ಹಾಂಗ್‌ಕಾಂಗ್, ಭಾರತ, ಇಂಡೊನೇಶ್ಯ, ಮಲೇಶ್ಯ, ಮೆಕ್ಸಿಕೊ, ಸಿಂಗಾಪುರ, ತೈವಾನ್, ಯುಎಇ , ಅಮೆರಿಕ , ಬ್ರಿಟನ್ ಸೇರಿದಂತೆ 13 ದೇಶ ಹಾಗೂ ಪ್ರದೇಶಗಳ 13,122 ಜನತೆಯನ್ನು ಸಮೀಕ್ಷೆ ನಡೆಸಲಾಗಿದೆ. ಇವರಲ್ಲಿ ಸುಮಾರು ಶೇ.48ರಷ್ಟು ಮಂದಿ ಪೋಷಕರು ತಮ್ಮ ಮಕ್ಕಳು 30 ವರ್ಷ ದಾಟಿದ್ದರೂ ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.