×
Ad

15.28 ಲಕ್ಷ ಕೋಟಿ ಮೊತ್ತದ ನಿಷೇಧಿತ ನೋಟು ಲೆಕ್ಕ ಹಾಕಲು ಮೆಷಿನ್ ಬಳಸಿಲ್ಲ: ಆರ್‌ಬಿಐ

Update: 2017-09-10 21:28 IST

ಹೊಸದಿಲ್ಲಿ, ಸೆ. 10: ನೋಟು ನಿಷೇಧದಿಂದ ಸಂಗ್ರಹವಾದ 1000 ರೂ. ಹಾಗೂ 500 ರೂ. ನೋಟುಗಳನ್ನು ಲೆಕ್ಕ ಹಾಕಲು ನಮ್ಮ ಯಾವುದೇ ಕಚೇರಿಗಳಲ್ಲಿ ಮೆಷಿನ್ ಬಳಸಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಕ್ರಿಯಿಸಿರುವ ಆರ್‌ಬಿಐ, ನಿಷೇಧಿತ ನೋಟುಗಳನ್ನು ಲೆಕ್ಕ ಹಾಕಲು ನಿಯೋಜಿಸಲಾದ ಒಟ್ಟು ಸಿಬ್ಬಂದಿ ಸಂಖ್ಯೆಯನ್ನು ನೀಡಲು ನಿರಾಕರಿಸಿದೆ ಹಾಗೂ ಈ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಆಗಸ್ಟ್ 30ರಂದು ಬಿಡುಗಡೆ ಮಾಡಿದ 2016-17ರ ವಾರ್ಷಿಕ ವರದಿಯಲ್ಲಿ ಆರ್‌ಬಿಐ, ನಿಷೇಧಕ್ಕೊಳಗಾದ ರೂಪಾಯಿ 1000 ಹಾಗೂ 500ರ 15.28 ಲಕ್ಷ ಕೋಟಿ ಅಥವಾ ಶೇ. 99ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂದೆ ಬಂದಿವೆ ಎಂದು ತಿಳಿಸಿದೆ.
2017 ಜೂನ್ 30ರಂದು ವರ್ಷಾಂತ್ಯಗೊಂಡ ಬ್ಯಾಂಕ್‌ನ ವಾರ್ಷಿಕ ವರದಿಯಲ್ಲಿ ಆರ್‌ಬಿಐ, 15.44 ಲಕ್ಷ ಕೋಟಿಯಲ್ಲಿ ಕೇವಲ 16.050 ಕೋಟಿ ನಿಷೇಧಿತ ನೋಟುಗಳು ಮಾತ್ರ ಹಿಂದೆ ಬಂದಿಲ್ಲ ಎಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2016 ನವೆಂಬರ್ 8ರಂದು ನೋಟು ನಿಷೇಧ ಮಾಡಿದಾಗ 1,716.5 ಕೋಟಿ 500 ರೂ. ನೋಟು ಹಾಗೂ 685.8 ಕೋಟಿ 1000 ರೂ. ನೋಟುಗಳು ಚಲಾವಣೆಯಲ್ಲಿ ಇತ್ತು. ಅಂದರೆ ಒಟ್ಟು 15.44 ಲಕ್ಷ ಕೋಟಿ ನೋಟುಗಳು ಚಲಾವಣೆಯಲ್ಲಿ ಇತ್ತು.
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಕಚೇರಿಯಲ್ಲಿ ಲೆಕ್ಕ ಹಾಕುವ ಉದ್ದೇಶಕ್ಕಾಗಿ ಯಂತ್ರಗಳನ್ನು ಬಳಸಿಲ್ಲ ಎಂದು ಆರ್‌ಬಿಐ ಆಗಸ್ಟ್ 10 ಆರ್‌ಟಿಐ ಪ್ರತಿಕ್ರಿಯೆಯಲ್ಲಿ ಹೇಳಿದೆ.

ನಿಷೇಧಿತ ನೋಟುಗಳ ಒಟ್ಟು ಸಂಖ್ಯೆಯನ್ನು ಸಂಯೋಜನೆಗೊಳಿಸಲು ಗುತ್ತಿಗೆ ಆಧಾರದಲ್ಲೂ ಲೆಕ್ಕಾ ಹಾಕುವ ಯಂತ್ರವನ್ನು ತೆಗೆದುಕೊಂಡಿಲ್ಲ ಎಂದು ಆರ್‌ಬಿಐ ಹೇಳಿದೆ. ನಿಷೇಧಿತ 1000 ರೂ. ಹಾಗೂ 500 ರೂಪಾಯಿಗಳ ನೋಟುಗಳನ್ನು ಲೆಕ್ಕ ಹಾಕಲು ಬಳಸಲಾದ ಯಂತ್ರದ ವಿವರ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಕೋರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News