×
Ad

ಗರ್ಭಿಣಿಯರಿಗೆ ಅಂಗನವಾಡಿಗಳಲ್ಲೇ ಬಿಸಿಯೂಟ: ಅ.2ರಿಂದ ‘ಮಾತೃಪೂರ್ಣ’ ಯೋಜನೆ ಜಾರಿ

Update: 2017-09-10 22:36 IST

ಮಂಗಳೂರು, ಸೆ.10: ಅಂಗನವಾಡಿಗಳಲ್ಲಿ ಶಿಶುಗಳ, ಪುಟ್ಟ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಸರಕಾರದ ಯೋಜನೆಯಲ್ಲಿ ಇನ್ನೊಂದು ಮಹತ್ವದ ಸೇರ್ಪಡೆಯಾಗಿ ‘ಮಾತೃಪೂರ್ಣ’ ಯೋಜನೆ ಅ. 2ರ ಗಾಂಧೀ ಜಯಂತಿಯಂದು ಕರ್ನಾಟಕದಲ್ಲಿ ಜಾರಿಗೆ ಬರಲಿದೆ. ಮಕ್ಕಳು ಹುಟ್ಟುವ ಮೊದಲೇ ಆರೋಗ್ಯಯುತ ಮಕ್ಕಳು ಹುಟ್ಟಲು ಈ ಯೋಜನೆ ಅತ್ಯಂತ ಮಹತ್ವಪೂರ್ಣವಾಗಿದೆ.

ಈ ಯೋಜನೆಯಡಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಪೌಷ್ಠಿಕ ಆಹಾರ ಬಿಸಿ ಊಟ ನೀಡುವುದು ಉದ್ದೇಶವಾಗಿದೆ. ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿಯಲ್ಲಿ ಗರ್ಭಿಣಿಯರಿಗೆ ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಅಡುಗೆ ತಯಾರಿಸಿ ಮಧ್ಯಾಹ್ನದ ಸಮಯದಲ್ಲಿ ಕೊಡಲ್ಪಡುವ ವೈಶಿಷ್ಟಪೂರ್ಣ ಯೋಜನೆಯಾಗಿದೆ.

ಈ ಯೋಜನೆಯಡಿ ಮಧ್ಯಾಹ್ನದ ಒಂದು ಪೂರ್ಣ ಪೌಷ್ಠಿಕ ಬಿಸಿ ಊಟದಲ್ಲಿ ಅನ್ನ, ಸಾಂಬರ್, ಪಲ್ಯದ ಜೊತೆಗೆ ಬೇಯಿಸಿದ ಮೊಟ್ಟೆ ಮತ್ತು ಹಾಲು ಒಳಗೊಂಡಿದೆ.

ಪ್ರತೀ ತಿಂಗಳಿನಲ್ಲಿ 25 ದಿನಗಳಂತೆ, ವರ್ಷದಲ್ಲಿ ಒಟ್ಟು 300 ದಿನಗಳು ಪೌಷ್ಠಿಕ ಆಹಾರ ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ ಮೊಳಕೆ ಬರಿಸಿದ ಕಾಳು ಕೊಡಲಾಗುತ್ತದೆ. ಹೆರಿಗೆ ಸಮಯದಲ್ಲಿ ತಾಯಂದಿರ ಹಾಗೂ ಶಿಶುಗಳ ಮರಣ ಪ್ರಮಾಣ ತಡೆಯುವುದು, ಜೊತೆಗೆ ಉತ್ತಮ ಆರೋಗ್ಯ ಬೆಳವಣಿಗೆ ಮೂಲಕ ರಕ್ತಹೀನತೆ ಕಡಿಮೆಗೊಳಿಸುವುದು ‘ಮಾತೃಪೂರ್ಣ’ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಗರ್ಭಿಣಿಯರಿಗೆ ಅಗತ್ಯವಿರುವ ಎಲ್ಲಾ ಪೌಷ್ಠಿಕಾಂಶಗಳನ್ನೊಳಗೊಂಡ ಮಧ್ಯಾಹ್ನದ ಪೌಷ್ಠಿಕ ಊಟ, ಕಬ್ಬಿಣಾಂಶದ ಮಾತ್ರೆಗಳನ್ನು ಮತ್ತು ಐಯೋಡಿನ್ ಯುಕ್ತ ಉಪ್ಪು ನೀಡಲಾಗುತ್ತದೆ. ಗರ್ಭಿಣಿಯರಿಗೆ ಮತ್ತು ಬಾಣಂತಿಯರ ಆರೈಕೆ ಹಾಗೂ ಪೌಷ್ಠಿಕಾಂಶ ಆಹಾರ ಸೇವನೆ ಮತ್ತು ನಿಯತ ಆರೋಗ್ಯ ತಪಾಸಣೆ ಹಾಗೂ ಆಪ್ತ ಸಮಾಲೋಚನೆ, ಆರೋಗ್ಯ ಬೆಳವಣಿಗೆ ನಿರ್ವಹಣೆ ಮತ್ತು ಮಾಹಿತಿ ಸೇವೆಗಳು. ನಿಗದಿಪಡಿಸಿರುವ ಪೌಷ್ಠಿಕಾಂಶದ ಆಹಾರ ಪ್ರಮಾಣ ಮತ್ತು ಪ್ರತಿದಿನ ಸಾಮಾನ್ಯವಾಗಿ ಅವರು ಸೇವಿಸುವ ಆಹಾರ ಪದಾರ್ಥಗಳಲ್ಲಿನ ಅಂತರ ಕಡಿಮೆ ಮಾಡುವುದು ಮತ್ತಿತರ ಸೇವೆಗಳು ಈ ಮಾತೃಪೂರ್ಣ ಯೋಜನೆ ಒಳಗೊಂಡಿದೆ. 

ಹೆಸರು ನೋಂದಣಿ: ಗರ್ಭಿಣಿ ಎಂದು ಗೊತ್ತಾದ ಕೂಡಲೇ ಹಾಗೂ ಗರಿಷ್ಠ 12 ವಾರದೊಳಗೆ ಅಂಗನವಾಡಿಯಲ್ಲಿ ತಪ್ಪದೇ ಹೆಸರು ನೋಂದಣಿ ಮಾಡಿಸಿ ಕೊಳ್ಳಬೇಕು. ಪ್ರತಿದಿನ ಸಾಮಾನ್ಯ ಮಹಿಳೆಯರಿಗಿಂತ ಒಂದೂವರೆಪಟ್ಟು ಹೆಚ್ಚಿನ ಪೌಷ್ಠಿಕಾಂಶವುಳ್ಳ ಸಮತೋಲನ ಆಹಾರ ಸೇವಿಸುವುದು (ಬೇಳೆ, ಕಾಳು, ಧಾನ್ಯ, ಹಸಿರು ಎಲೆ ಸೊಪ್ಪು, ತರಕಾರಿ, ಮೊಟ್ಟೆ ಮತ್ತು ಹಾಲು).

ಕಬ್ಬಿಣಾಂಶದ ಹಾಗೂ ಪೋಲಿಕ್ ಆಸಿಡ್ ಮಾತ್ರೆಗಳನ್ನು ಮತ್ತು ಐಯೋಡಿನ್‌ಯುಕ್ತ ಉಪ್ಪನ್ನು ನಿಯಮಿತವಾಗಿ ಸೇವಿಸುವುದು. ಪ್ರತಿ ದಿನ ಹಗಲು ಹೊತ್ತಿನಲ್ಲಿ ಎರಡು ಗಂಟೆ ವಿಶ್ರಾಂತಿ ಪಡೆಯುವುದು. ಪ್ರಸವ ಪೂರ್ವದಲ್ಲಿ ಕನಿಷ್ಠ ನಾಲ್ಕು ಬಾರಿ ಹಾಗೂ ಅವಶ್ಯಕಾನುಸಾರ ಮತ್ತು ಪ್ರಸವ ನಂತರ ನಿಯಮಿತವಾಗಿ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು. ಹೆರಿಗೆಯನ್ನು ಕಡ್ಡಾಯವಾಗಿ ಆಸ್ಪತ್ರೆಯಲ್ಲಿಯೇ ಮಾಡಿಸಿಕೊಳ್ಳುವುದು ಇತ್ಯಾದಿ ಪ್ರಸವಪೂರ್ವ ಮಾಹಿತಿ ನೀಡಲಾಗುತ್ತದೆ.

ಕಾರ್ಯಕ್ರಮದ ಉದ್ದೇಶ: ಗರ್ಭಿಣಿಯರು/ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ಹೆಚ್ಚು ಪೌಷ್ಠಿಕತೆ ಅಂಶಗಳನ್ನು ಒಳಗೊಂಡ ಮಧ್ಯಾಹ್ನದ ಪೌಷ್ಠಿಕ ಊಟ ಒದಗಿಸುವ ಮೂಲಕ ಅವರ ಪೌಷ್ಠಿಕಾಂಶದ ಪ್ರಮಾಣವನ್ನು ಹೆಚ್ಚಿಸಿ, ಕಡಿಮೆ ತೂಕದ ಮಕ್ಕಳ ಜನನ ಹಾಗೂ ಮಕ್ಕಳಲ್ಲಿನ ಅಪೌಷ್ಠಿಕತೆ ಪ್ರಮಾಣ ಕಡಿಮೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶ. ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಗರ್ಭಿಣಿಯರ/ಬಾಣಂತಿಯರ ಪ್ರಮಾಣವನ್ನು ಕಡಿಮೆ ಮಾಡುವುದು. ಅವರಿಗೆ ನೀಡುವ ಆಹಾರವನ್ನು ಸ್ವತಃ ಸೇವಿಸುವಂತೆ ನೋಡಿಕೊಳ್ಳಲಾಗುತ್ತದೆ.

ಶಿಶು ಮರಣ ಪ್ರಮಾಣ ಮತ್ತು ಮಾತೃತ್ವ ಮರಣ ಪ್ರಮಾಣಗಳನ್ನು ಮತ್ತು ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣವನ್ನು ಕಡಿಮೆ ಮಾಡುವುದು, ಬಾಣಂತಿಯರಲ್ಲಿ ಅಪೌಷ್ಠಿಕತೆಯನ್ನು ನಿರ್ಮೂಲನೆ ಮಾಡುವುದು, ಅಂಗನವಾಡಿ ಕೇಂದ್ರಗಳಲ್ಲಿ ತಾಯಂದಿರ ನೋಂದಣಿ ಹೆಚ್ಚಿಸುವುದು. ಗರ್ಭಿಣಿ ಮಹಿಳೆಯರು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮತ್ತು ಚುಚ್ಚುಮದ್ದು ಸೇವೆ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು.

ಗರ್ಭಿಣಿಯರು/ಬಾಣಂತಿಯರಿಗೆ ನಿಗದಿಪಡಿಸಿರುವ ಪೌಷ್ಠಿಕಾಂಶದ ಆಹಾರ ಪ್ರಮಾಣ ಮತ್ತು ಸಾಮಾನ್ಯವಾಗಿ ಪ್ರತಿ ದಿನ ಅವರು ತೆಗೆದುಕೊಳ್ಳುವ ಆಹಾರ ಪ್ರಮಾಣದಲ್ಲಿನ ಅಂತರವನ್ನು ಕಡಿಮೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಮಾತೃಪೂರ್ಣ’ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈಗಾಗಲೇ ಪೂರ್ವಭಾವಿ ಸಭೆ ನಡೆದು ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ 2,104 ಅಂಗನವಾಡಿಗಳಲ್ಲಿ ‘ಮಾತೃಪೂರ್ಣ’ ಯೋಜನೆ ಜಾರಿಯಾಗಲಿದ್ದು, ಆಯಾ ಅಂಗನವಾಡಿ ವ್ಯಾಪ್ತಿಯ ಗರ್ಭಿಣಿಯರಿಗೆ ಅಂಗನವಾಡಿಗಳಲ್ಲೇ ಬಿಸಿ ಪೌಷ್ಠಿಕ ಆಹಾರ ಸಿದ್ಧಪಡಿಸಿ ನೀಡಲಾಗುವುದು.

ಆಹಾರ ತಯಾರಿಕೆಗೆ ಅಗತ್ಯವಾದ ಪಾತ್ರೆ ಪರಿಕರಗಳು, ಆಹಾರ ಸಾಮಗ್ರಿಗಳ ಖರೀದಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ದ.ಕ. ಜಿಲ್ಲೆಯಲ್ಲಿ ಅಂದಾಜು 29,000 ಕ್ಕೂ ಅಧಿಕ ಗರ್ಭಿಣಿಯರಿಗೆ ಇದರ ಪ್ರಯೋಜನ ದೊರಕಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News