ಭಾರತೀಯ ಸಂಗೀತದಿಂದ ಶಾಂತಿ ಸಿಗಲು ಸಾಧ್ಯ: ಅರವಿಂದ ಬ್ರಹ್ಮಕಲ್
ಉಡುಪಿ, ಸೆ.10: ಇಂದು ಜಗತ್ತಿನಾದ್ಯಂತ ಹಿಂಸೆ ತಾಂಡವಾಡುತ್ತಿದ್ದು, ಎಲ್ಲೆಡೆ ಅಶಾಂತಿ ತಲೆ ದೊರಿದೆ. ಈ ಮಧ್ಯೆ ಜನ ನೆಮ್ಮದಿಯನ್ನು ಅರಸುತ್ತಿದ್ದಾರೆ. ಇದನ್ನು ಭಾರತೀಯ ಸಂಗೀತ ಮಾತ್ರ ನೀಡಲು ಸಾಧ್ಯ ಎಂದು ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಕಾರ್ಯದರ್ಶಿ ಅರವಿಂದ ಬ್ರಹ್ಮಕಲ್ ಹೇಳಿದ್ದಾರೆ.
ಉಡುಪಿಯ ರಂಜನಿ ಸ್ಮಾರಕ ಟ್ರಸ್ಟ್ ಹಾಗೂ ಎಂಜಿಎಂ ಕಾಲೇಜಿನ ಸಹ ಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ನಡೆದ ಏಳು ದಿನಗಳ ರಂಜನಿ ಸಂಸ್ಮರಣಾ ಸಂಗೀತ ಕಚೇರಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಕೆಲವು ವರ್ಷಗಳ ಕೆಳಗೆ ಯೋಗ ಮತ್ತು ಆಯುರ್ವೇದದ ಬಗ್ಗೆ ಜನರಲ್ಲಿ ಕೀಳರಿಮೆ ಇತ್ತು. ಆದರೆ ಈಗ ಆ ಎರಡು ಕ್ಷೇತ್ರಗಳಿಗೆ ಇಡೀ ಜಗತ್ತಿನಾದ್ಯಂತ ಮಹತ್ತರ ಸ್ಥಾನಮಾನ ದೊರೆತಿದೆ. ಮುಂದೆ ಕೆಲವೇ ವರ್ಷಗಳಲ್ಲಿ ಲಲಿತಾ ಕಲೆ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತಕ್ಕೂ ಇದೇ ರೀತಿಯ ಮನ್ನಣೆ ಜಗತ್ತಿನಲ್ಲಿ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಗೀತದಲ್ಲಿ ಉತ್ತಮ ಸಾಧನೆ ತೋರುವ ಮಕ್ಕಳು ಎಸೆಸೆಲ್ಸಿ ಶಿಕ್ಷಣದ ಬಳಿಕ ಸಂಗೀತವನ್ನೇ ಮರೆತು ಬಿಡುತ್ತಾರೆ. ಈ ರೀತಿ ಮಾಡದೆ ಉನ್ನತ ಶಿಕ್ಷಣ ಹಾಗೂ ವೃತ್ತಿಯ ವೇಳೆಯು ತಮ್ಮಲ್ಲಿರುವ ಪ್ರತಿಭೆಯನ್ನು ದೂರ ಮಾಡಬೇಡಿ. ಪೊಷಕರು ತಮ್ಮಲ್ಲಿರುವ ಸಂಪತ್ತಿನ ಶೇ.1ರಷ್ಟು ಭಾಗವನ್ನು ಕಲಾವಿದರು ಹಾಗೂ ಕಲಾ ಸಂಘಟನೆಗಳಿಗೆ ದಾನ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಅಧ್ಯಕ್ಷತೆಯನ್ನು ಕಲಾ ವಿಮರ್ಶಕ ಎ.ಈಶ್ವರಯ್ಯ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್, ಪಿಪಿಸಿಯ ನಿವೃತ್ತ ಪ್ರಾಂಶು ಪಾಲ ಪ್ರೊ.ಸದಾಶಿವ ರಾವ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ವಸಂತ ಲಕ್ಷ್ಮಿ ಹೆಬ್ಬಾರ್ ಸ್ವಾಗತಿಸಿದರು. ಅರವಿಂದ ಹೆಬ್ಬಾರ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶ್ರೀಮತಿ ದೇವಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಚೈನ್ನೈಯ ಶಾಂತಲಾ ಸುಬ್ರಹ್ಮಣ್ಯಂ ಅವರಿಂದ ಕೊಳಲುವಾದನ ನಡೆಯಿತು.