ದೇರಳಕಟ್ಟೆ: ನಿಟ್ಟೆ ವಿಶ್ವವಿದ್ಯಾಲಯದ 7ನೆ ವಾರ್ಷಿಕ ಘಟಿಕೋತ್ಸವ
ಮಂಗಳೂರು, ಸೆ. 10: ಉತ್ತಮ ಗುರಿ ಮತ್ತು ಸರಿಯಾದ ಮಾರ್ಗದರ್ಶನದೊಂದಿಗೆ ಮುಂದುವರಿದಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಬೆಲ್ಜಿಯಂನ ಎಸ್‌ಐಸಿಒಟಿ ಅಧ್ಯಕ್ಷ ಹಾಗೂ ಕೊಯಮತ್ತೂರು ಗಂಗಾ ಆಸ್ಪತ್ರೆಯ ಅಧ್ಯಕ್ಷ ಪ್ರೊ. ಯಸ್. ರಾಜಶೇಖರನ್ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ಜರಗಿದ ಏಳನೆ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ನಿಟ್ಟೆ ವಿವಿಯಂತಹ ಗುಣಮಟ್ಟದ ಶಿಕ್ಷಣ ಕೊಡುವ ಸಂಸ್ಥೆಯ ಜೊತೆಗೆ ಅತ್ಯುತ್ತಮ ಬೋಧಕರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದಿರುವುದು ಪದವೀಧರರ ಅದೃಷ್ಟ. ಒಳ್ಳೆಯ ಗುರಿ ಮತ್ತು ಪರಿಶ್ರಮದೊಂದಿಗೆ ಮುಂದೆ ಸಾಗುವಂತೆ ಕರೆ ನೀಡಿದರು. ಮಾಡುವ ಕೆಲಸವನ್ನು ಪ್ರೀತಿಸಬೇಕು. ಕೆಲಸದಿಂದ ಬೇಸರಗೊಳ್ಳದೆ ಒತ್ತಡಗಳಿಂದ ಕಾರ್ಯ ನಿರ್ವಹಿಸದೆ ಇಚ್ಛಿಸುವ ಕ್ಷೇತ್ರದಲ್ಲಿ ಮುಂದುವರಿಯುವರಿಂದ ಭವಿಷ್ಯದಲ್ಲಿ ಯಶಸ್ವಿಯಾಗಲು ಸಾಧ್ಯ. ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದವರಿಂದ ಸಿಗುವ ಜ್ಞಾವು ಜೀವನಕ್ಕೆ ದಾರಿದೀಪವಾಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ, ಪದವಿ ಪಡೆದ ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಯನ್ನು ಸ್ಮರಿಸುವುದರ ಜೊತೆಗೆ ಹೆತ್ತವರನ್ನು ಗೌರವಿಸಬೇಕು ಎಂದು ಕವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಾಕ್ಟರ್ ಆಫ್ ಸೈನ್ಸ್ ಪಿಎಚ್‌ಡಿ ಗೌರವ ಡಾಕ್ಟರೇಟ್‌ನ್ನು ಅಂತಾರಾಷ್ಟ್ರೀಯ ಮಕ್ಕಳ ಸೀಳ್ದುಟಿ ಫೌಂಡೇಶನ್ನಿನ ಸ್ಥಾಪಕ ಜರ್ಮನಿಯ ಖ್ಯಾತ ಮೆಕ್ಸಿಲೋ ಫೇಷಿಯಲ್ ಸರ್ಜನ್ ಪ್ರೊ. ಹರ್ಮನ್ ಎಫ್.ಸೇಲರ್ ಮತ್ತು ಫಿಲಾಂತ್ರೋಫಿಸ್ಟ್ ಹಾಗೂ ಉದ್ಯಮಿ ಲಾಲ್‌ಚಂದ್ ಗಜ್ರಿಯಾ ಅವರಿಗೆ ಪ್ರದಾನ ಮಾಡಲಾಯಿತು.
ಡಾ.ಎ.ಕೆ. ಮುನ್ಶೀ ಚಿನ್ನದ ಪದಕವನ್ನು ಎಂಡಿಎಸ್‌ನ ಡಾ. ಅನೀಷಾ ಕೇಶನ್, ಡಾ.ಯು.ಯಸ್. ಮೋಹನದಾಸ್ ನಾಯಕ್ ಮತ್ತು ನಿಟ್ಟೆ ವಿ.ವಿ ಚಿನ್ನದ ಪದಕವನ್ನು ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ವಿಭಾಗದ ಡಾ. ಕೊಂಗ್ ಶು ಫೆಯ್, ಮುಲ್ಕಿ ರಾಮಮೋಹನ್ ಅಡ್ಯಂತಾಯ ಹಾಗೂ ನಿಟ್ಟೆ ವಿ.ವಿ ಚಿನ್ನದ ಪದಕವನ್ನು ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ ವಿಭಾಗದ ಡಾ. ಶಿಫಾಲಿ ಪ್ರಭಾಕರ್, ಫಾರ್ಮಸಿಯ ಚೈತ್ರಾ .ಆರ್. ಶೆಟ್ಟಿ, ನರ್ಸಿಂಗ್ ಸೈನ್ಸ್‌ನ ವಿನೀತಾ ಸನ್ನಿ, ಫಿಸಿಯೋಥೆರಪಿ ವಿಭಾಗದ ಸರಸ್ವತಿ ಶ್ರೇಷ್ಟ, ಬ್ಯಾಚುಲರ್ ಆಫ್ ಸೈನ್ಸ್‌ನ ಕಾವ್ಯ ತಾಲ್ ನಿಟ್ಟೆ ವಿಶ್ವವಿದ್ಯಾಲಯದ ಚಿನ್ನದ ಪದಕ, ಮಾಸ್ಟರ್ ಆಫ್ ಬಯೋಮೆಡಿಕಲ್ ಸೈನ್ಸ್ ವಿಭಾಗದ ಸೋನಂ ಎನ್.ಕಿಲ್ಲೆ ಡಾ.ಇಂದ್ರಾಣಿ ಕರುಣಾಸಾಗರ್ ಚಿನ್ನದ ಪದಕ, ಕಲಾ ವಿಭಾಗದಲ್ಲಿ ಪತ್ರಿಕೋದ್ಯಮ ಮತುತಿ ಸಾಮೂಹಿಕ ಸಂವಹನ ವಿಭಾಗದ ರಿತಿಕಾ ರವೀಂದ್ರ ಪ್ರಭು, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿಯ ಅಥಿರಾ ರಾಜೀವ್ ನಿಟ್ಟೆ ವಿ.ವಿ ಚಿನ್ನದ ಪದಕಗಳನ್ನು ಪಡೆದುಕೊಂಡರು.
ಡಾಕ್ಟರ್ ಆಫ್ ಫಿಲೋಸಫಿಯಲ್ಲಿ 31, ವೈದ್ಯಕೀಯ ವಿಭಾಗದಲ್ಲಿ ಸ್ನಾತಕೋತ್ತರ ಮತ್ತು ಪದವಿ ವಿಭಾಗದ 221, ದಂತ ವೈದ್ಯಕೀಯ ವಿಭಾಗದ ಸ್ನಾತಕೋತ್ತರ ಮತ್ತು ಪದವಿ ಸೇರಿದಂತೆ 136, ಫಾರ್ಮಸಿಯ 123, ನರ್ಸಿಂಗ್ ವಿಭಾಗದ 111, ಫಿಸಿಯೋಥೆರಪಿಯ ಸ್ನಾತಕೋತ್ತರ ಮತ್ತು ಪದವಿ ವಿಭಾಗದ 33, ಅಲೈಡ್ ಹೆಲ್ತ್ ಸೈನ್ಸಸ್‌ನ 39, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ 15, ಬಯೋಲಾಜಿಕಲ್ ಸೈನ್ಸ್‌ನ 36 ಸೇರಿದಂತೆ ಒಟ್ಟು 745 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಿಟ್ಟೆ ವಿ.ವಿ.ಯ ಸಹ ಕುಲಾಧಿಪತಿ ಪ್ರೊ. ಡಾ. ಶಾಂತಾರಾಮ ಶೆಟ್ಟಿ, ಉಪ ಕುಲಪತಿ ಪ್ರೊ. ಎಸ್. ರಮಾನಂದ ಶೆಟ್ಟಿ, ಕುಲಸಚಿವ ಪ್ರೊ. ಎಂ.ಎಸ್ ಮೂಡಿತ್ತಾಯ, ಪರೀಕ್ಷಾಂಗ ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ, ಕ್ಷೇಮ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ, ದಂತ ಮಹಾವಿದ್ಯಾಲಯದ ಡೀನ್ ಯು.ಎಸ್. ಕೃಷ್ಣ ನಾಯಕ್, ನರ್ಸಿಂಗ್ ಸೈನ್ಸ್‌ನ ಡೀನ್ ಡಾ. ಫಾತಿಮಾ ಡಿಸಿಲ್ವ, ಫಿಸಿಯೋಥೆರಪಿ ಕಾಲೇಜಿಯ ಡೀನ್ ಡಾ. ಪಿ. ಧನೇಶ್ ಕುಮಾರ್, ಶೈಕ್ಷಣಿಕ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಲಾನಾ ನಿರ್ದೇಶನಾಲಯ ನಿರ್ದೇಶಕ ಡಾ. ರಾಜಶೇಖರ್ ಹಾಗೂ ಆಡಳಿತ ಸಹ ಕುಲಸಚಿವೆ ಸಾಯಿ ಪ್ರಸನ್ನ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.