ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ: ಸಿಂಧೂ ಭಾಸ್ಕರ್ ನಾಯ್ಕ
ಭಟ್ಕಳ, ಸೆ. 10: ಪ್ರತಿಯೊಂದು ಮಗುವಿನಲ್ಲಿ ಒಂದೊಂದು ವಿಶಿಷ್ಠವಾದ ಪ್ರತಿಭೆಗಳು ಇರುತ್ತದೆ. ಶಾಲಾ ಹಂತದಲ್ಲಿ ಶಿಕ್ಷಕರು ಮಗುವಿನ ಚಲನ ವಲನ, ಆಸಕ್ತಿಗಳನ್ನು ಗಮನಿಸಿ ಅವರಲ್ಲಿರುವ ಸೂಕ್ತ ಪ್ರತಿಭೆಗಳನ್ನು ಹೊರಹೊಮ್ಮವಂತೆ ಮಾಡಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ವಾಸಿಯಾಗಲು ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿಂಧೂ ಬಾಸ್ಕರ್ ನಾಯ್ಕ ಅಭಿಪ್ರಾಯಪಟ್ಟರು.
ಅವರು ಮುರ್ಡೇಶ್ವರ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಜನತಾ ಕಾಲೋನಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುರ್ಡೇಶ್ವರ ಮಾವಳ್ಳಿ-2 ಗ್ರಾಮ ಪಂ. ಅಧ್ಯಕ್ಷರಾದ ನಾಗರತ್ನ ಪಡಿಯಾರ್ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಸಂಸ್ಕೃತಿ, ಸಂಸ್ಕಾರ, ಅಭಿನಯ, ಅನುಭವ, ನೃತ್ಯ , ಭಾಷೆ ಎಲ್ಲಾ ಪ್ರಕಾರಗಳಲ್ಲಿಯೂ ತಮ್ಮ ಪ್ರತಿಭೆಗಳನ್ನು ಹೊರಹಾಕಲು ಸಾಧ್ಯ ಈ ಮೂಲಕ ಭವಿಷ್ಯತ್ತಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ತಾ. ಪಂ. ಸದಸ್ಯರಾದ .ಸುಲೋಚನಾ ಸತೀಶ್ ನಾಯ್ಕ, ಆರ್ .ಎನ್.ಎಸ್ ಸಮೂಹ ಸಂಸ್ಥೆಗಳ ಜನರಲ್ ಮ್ಯಾನೇಜರ್ ಮಂಜುನಾಥ್ ಶೆಟ್ಟಿ, ಆರ್ .ಎನ್.ಎಸ್ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಎಂ.ವಿ ಹೆಗಡೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಾಧವ್ ಪಿ, ಭಟ್ಕಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಂಕರ್ ನಾಯ್ಕ , ಉಪಾಧ್ಯಕ್ಷರಾದ ಗಣಪಿ ಜಿ. ಭಟ್, ಭಾಸ್ಕರ್ ನಾಯ್ಕ ಮತ್ತು ವಾಸುದೇವ ಹೆಬ್ಬಾರ್ ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ. ಸುರೇಶ್ ಶೆಟ್ಟಿ ಸ್ವಾಗತಿಸಿ, ಜನತಾ ಕಾಲೋನಿಯ ಸಮೂಹ ಸಂಪನ್ಮೂಲ ವ್ಯಕ್ತಿ, ಶ್ರಿ. ಮಹಾದೇವ್ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ದಯಾನಂದ್ ನಾಯ್ಕ ವಂದಿಸಿ ಶ್ರೀಮತಿ ಸಂಧ್ಯಾ ಮೊಗೇರ್ ಕಾರ್ಯಕ್ರಮ ನಿರ್ವಹಿಸಿದರು.