×
Ad

ಮತ್ತೊಮ್ಮೆ ಪ್ರವಾಹಕ್ಕೆ ನಲುಗಿದ ಅಸ್ಸಾಂ: 72,000ಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿ

Update: 2017-09-11 19:33 IST

ಗುವಾಹಟಿ, ಸೆ.11: ಕಳೆದೊಂದು ವಾರದಿಂದ ಸ್ವಲ್ಪ ಇಳಿಮುಖವಾಗಿದ್ದ ಮಳೆ ಮತ್ತೆ ಮುಸಲಧಾರೆಯಾಗಿ ಸುರಿಯುವುದರೊಂದಿಗೆ ಅಸ್ಸಾಂನಲ್ಲಿ ಮತ್ತೊಮ್ಮೆ ಪ್ರವಾಹ ಸ್ಥಿತಿ ಉಂಟಾಗಿದ್ದು 72,000ಕ್ಕೂ ಹೆಚ್ಚು ಮಂದಿ ತೊಂದರೆಗೆ ಒಳಗಾಗಿದ್ದಾರೆ.

ಅಸ್ಸಾಂನಲ್ಲಿ ಹಠಾತ್ ಆಗಿ ತಲೆದೋರಿರುವ ಪ್ರವಾಹಸ್ಥಿತಿಗೆ ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆ ಕಾರಣವಾಗಿದ್ದು ಅಸ್ಸಾಂನ ಐದು ಜಿಲ್ಲೆಗಳ ಸುಮಾರು 72,000ದಷ್ಟು ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಧೆಮಾಜಿ, ಮೊರಿಗಾಂವ್, ನಗಾಂವ್, ಸೋನಿತ್‌ಪುರ್ ಜಿಲ್ಲೆ ನೆರೆಹಾವಳಿಗೆ ತುತ್ತಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎಎಸ್‌ಡಿಎಂಎ) ಹೇಳಿಕೆಯಲ್ಲಿ ತಿಳಿಸಿದೆ. ಓರ್ವ ನಾಪತ್ತೆಯಾಗಿದ್ದು ನೆರೆಯ ಅರುಣಾಚಲ ಪ್ರದೇಶದೊಂದಿಗೆ ಸಂಪರ್ಕ ಕಡಿತಗೊಂಡಿದೆ. 13,928 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸೋನಿತ್‌ಪುರ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಗಂಭೀರಾವಸ್ಥೆಗೆ ತಲುಪಿದ್ದು ರಾಷ್ಟ್ರೀಯ ಹೆದ್ದಾರಿ 15 ನೆರೆನೀರಿನಲ್ಲಿ ಮುಳುಗಿದೆ. ಜಿಲ್ಲೆಯ ಪ್ರಮುಖ ಪಟ್ಟಣವಾದ ಬಲಿಪಾರ ಕೂಡಾ ನೆರೆನೀರಿನಲ್ಲಿ ಮುಳುಗಿದ ಕಾರಣ ಅಸ್ಸಾಂನ ಲಖಿಂಪುರ್, ಧೆಮಾಜಿ, ಜೊನಯ್ ಹಾಗೂ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರ್‌ಗೆ ಸಂಪರ್ಕ ಕಡಿತಗೊಂಡಿದೆ.

 ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕಮೆಂಗ್ ನದಿ ಉಕ್ಕಿಹರಿಯುತ್ತಿದ್ದು ಅಸ್ಸಾಂ ರಾಜ್ಯದ ರಂಗಪಾರ, ಬಲಿಪಾರ ಮತ್ತು ಚರಿದ್ವಾರ್ ಪ್ರದೇಶಕ್ಕೆ ನೆರೆನೀರು ನುಗ್ಗಿದೆ. ಒಂದು ಆಸ್ಪತ್ರೆ, ಶಾಲೆ ಹಾಗೂ ವಾಣಿಜ್ಯ ಕಟ್ಟಡ ಸಂಕೀರ್ಣವೊಂದಕ್ಕೆ ತೀವ್ರ ಹಾನಿಯಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾ ಂತರಿಸಲಾಗಿದೆ .

ಪ್ರವಾಹಪೀಡಿತ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುವಂತೆ ಮುಖ್ಯಮಂತ್ರಿ ಸರ್ಬನಂದ ಸೊನೊವಾಲ್ ಜಲಸಂಪನ್ಮೂಲ ಸಚಿವ ಕೇಶವ್ ಮಹಾಂತಗೆ ಸೂಚಿಸಿದ್ದಾರೆ. ಅಸ್ಸಾಂನಲ್ಲಿ ಈ ವರ್ಷ ನೆರೆಹಾವಳಿಗೆ ಬಲಿಯಾದವರ ಸಂಖ್ಯೆ 159ಕ್ಕೆ ತಲುಪಿದ್ದು ಜೊರ್ಹಟ್ ಜಿಲ್ಲೆಯಲ್ಲಿ ಬ್ರಹ್ಮಪುತ್ರ ನದಿ, ಗೋಲಘಟ್ ಜಿಲ್ಲೆಯಲ್ಲಿ ಧನ್‌ಸಿರಿ ನದಿ, ಸೋನಿತ್‌ಪುರ್ ಜಿಲ್ಲೆಯಲ್ಲಿ ಜಿಯ ಭರಾಲಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ ಎಂದು ಎಎಸ್‌ಡಿಎಂಎ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News