ವೈದ್ಯರು ಮೆದುಳಿನಲ್ಲಿದ್ದ ಗೆಡ್ಡೆ ತೆಗೆಯುತ್ತಿದ್ದಾಗ ಮೊಬೈಲ್ ನಲ್ಲಿ ಕ್ಯಾಂಡಿಕ್ರಶ್ ಆಡಿದ ಬಾಲಕಿ!
ಚೆನ್ನೈ, ಸೆ.11: ಹತ್ತು ವರ್ಷದ ಬಾಲಕಿಯೊಬ್ಬಳ ಮೆದುಳಿನಲ್ಲಿದ್ದ ಗೆಡ್ಡೆಯೊಂದನ್ನು ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯುತ್ತಿದ್ದಾಗ ಬಾಲಕಿ ಮೊಬೈಲ್ ನಲ್ಲಿ ತನ್ನಿಷ್ಟದ ಗೇಮ್ ಅನ್ನು ಆಡಿದ ಅಪರೂಪದ ಘಟನೆ ಚೆನ್ನೈಯ ಆಸ್ಪತ್ರೆಯಲ್ಲಿ ನಡೆದಿದೆ.
ಎಚ್ಚರದಿಂದಿದ್ದು, ಮಾತನಾಡಿಕೊಂಡು, ಗೇಮ್ ಆಡಿಕೊಂಡು ಬಾಲಕಿ ವೈದ್ಯರಿಗೆ ವಿಶ್ವಾಸ ತುಂಬಿದ್ದಳು. 5ನೆ ತರಗತಿಯ ವಿದ್ಯಾರ್ಥಿನಿ ನಂದಿನಿ ಅಪಸ್ಮಾರಕ್ಕೀಡಾಗಿದ್ದರಿಂದ ಆಕೆಯನ್ನು ಎಸ್ ಐಎಂಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಮೆದುಳಿನ ಅತಿ ಮುಖ್ಯ ಭಾಗದಲ್ಲಿ ಗೆಡ್ಡೆಯೊಂದು ಬೆಳೆದಿರುವುದು ಮೆದುಳಿನ ಸ್ಕ್ಯಾನ್ ನಿಂದ ಗೊತ್ತಾಗಿತ್ತು.
ಗೆಡ್ಡೆ ಇದೇ ರೀತಿ ಬೆಳೆದರೆ ಬಾಲಕಿ ಪಾರ್ಶ್ವವಾಯು ಪೀಡಿತಳಾಗಲಿದ್ದಾಳೆ ಎಂದು ಆಸ್ಪತ್ರೆಯ ವೈದ್ಯ ಡಾ. ರೂಪೇಶ್ ಕುಮಾರ್ ಪೋಷಕರಲ್ಲಿ ಹೇಳಿದ್ದರು. ಕ್ರಾನಿಯೋಟಮಿ ಎನ್ನುವ ವಿಧಾನದ ಮೂಲಕ ಬಾಲಕಿಯ ಮೆದುಳಿನಲ್ಲಿದ್ದ ಗೆಡ್ಡೆಯನ್ನು ತೆಗೆಯಲು ನಿರ್ಧರಿಸಲಾಯಿತು.
“ಸಾಮಾನ್ಯ ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲು ನಾನು ಇಚ್ಛಿಸಲಿಲ್ಲ. ಏಕೆಂದರೆ ಅದು ಅತೀ ಸೂಕ್ಷ್ಮ ಭಾಗವಾಗಿದ್ದು, ಆಕಸ್ಮಾತ್ ಬೇರೆ ನರವನ್ನು ಮುಟ್ಟಿದ್ದರೂ ಆಕೆಯ ದೇಹದ ಎಡಭಾಗ ಸಂಪೂರ್ಣ ಪಾರ್ಶ್ವವಾಯು ಪೀಡಿತವಾಗುವ ಅಪಾಯವಿತ್ತು. “ ಎಂದು ರೂಪೇಶ್ ಕುಮಾರ್ ಹೇಳಿದ್ದಾರೆ.
ರೋಗಿಯನ್ನು ಎಚ್ಚರ ತಪ್ಪಿಸದೆ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಮುಂದಾದರು. ವಯಸ್ಕರಲ್ಲಿ 2 ಶೇ.ದಷ್ಟು ಮಾತ್ರ ಜನರಿಗೆ ಎಚ್ಚರದಲ್ಲಿದ್ದಂತೆಯೇ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಆದರೆ ಮಕ್ಕಳಲ್ಲಿ ಇದು ತೀರಾ ಅಪರೂಪ ಎನ್ನುತ್ತಾರೆ ಆಸ್ಪತ್ರೆಯ ಮತ್ತೋರ್ವ ವೈದ್ಯ ಡಾ.ಸುರೇಶ್ ಪ್ರಭು.
“ಗೆಡ್ಡೆಯನ್ನು ಹೊರತೆಗೆದ ಸಂದರ್ಭ ನಾನು ಶಸ್ತ್ರಚಿಕಿತ್ಸಾ ಕೊಠಡಿಯೊಳಗಿದ್ದೆ. ನಂದಿನಿ ನನ್ನ ಮೊಬೈಲ್ ನಲ್ಲಿ ಕ್ಯಾಂಡಿ ಕ್ರಶ್ ಆಡುತ್ತಿದ್ದಳು. ನಾವು ಹೇಳಿದಾಗ ಆಕೆ ಕೈ ಹಾಗೂ ಕಾಲನ್ನು ಅಲ್ಲಾಡಿಸುತ್ತಿದ್ದಳು. ತಾವು ಶಸ್ತ್ರಚಿಕಿತ್ಸೆ ನಡೆಸುತ್ತಿರುವ ಭಾಗದಿಂದ ಆಕೆಯ ಚಲನೆಗೆ ತೊಂದರೆಯಾಗಬಾರದು ಎನ್ನುವುದನ್ನು ವೈದ್ಯರು ತಿಳಿಯಬೇಕಾಗಿತ್ತು. ಆಕೆ ಧೈರ್ಯವಂತೆ” ಎಂದು ಆಕೆಯ ಸಂಬಂಧಿಕರೊಬ್ಬರು ಹೇಳಿದ್ದಾರೆ.
ಈ ರೀತಿಯ ಶಸ್ತ್ರಚಿಕಿತ್ಸೆಯ ನಂತರ ಮಕ್ಕಳಿಗೆ ಯಾವ ಸಮಸ್ಯೆಯೂ ಎದುರಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.