×
Ad

ರಸೂಲನ್ ಬೀಬಿ ನನ್ನ ತಾಯಿಯಿದ್ದಂತೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

Update: 2017-09-11 20:13 IST

ಹೊಸದಿಲ್ಲಿ, ಸೆ.11: 1965ರಲ್ಲಿ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮರಾಗಿದ್ದ ವೀರಯೋಧ ಅಬ್ದುಲ್ ಹಮೀದ್ ಅವರ ಪತ್ನಿ 80 ವರ್ಷದ ರಸೂಲನ್ ಬೀಬಿಯವರ ಪಾದ ಮುಟ್ಟಿ ನಮಸ್ಕರಿಸಿದ್ದ ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್, “ರಸೂಲನ್ ಬೀಬಿ ನನ್ನ ತಾಯಿಯಿದ್ದಂತೆ” ಎಂದು ಹೇಳಿದ್ದಾರೆ.

ವೀರಯೋಧ ಅಬ್ದುಲ್ ಹಮೀದ್ ಹುತಾತ್ಮರಾದ 52ನೆ ವರ್ಷದ ಸಂದರ್ಭ ನಡೆದ ಕಾರ್ಯಕ್ರಮದಲ್ಲಿ ಬಿಪಿನ್ ರಾವತ್ ರಸೂಲನ್ ಬೀಬಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದರು. ಸೇನಾ ಮುಖ್ಯಸ್ಥರ ಈ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು. ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಪಿನ್ ರಾವತ್, “ರಸೂಲನ್ ಬೀಬಿ ನನ್ನ ತಾಯಿಯಿದ್ದಂತೆ. ಸನ್ಮಾನ ಕಾರ್ಯಕ್ರಮದ ಸಂದರ್ಭ ನನ್ನ ತಾಯಿಯನ್ನೇ ಸನ್ಮಾನಿಸುತ್ತಿರುವಂತೆ ನನಗೆ ಭಾಸವಾಯಿತು. ಆದ್ದರಿಂದ ಗೌರವ ಸೂಚಿಸುವ ಸಲುವಾಗಿ ನಾನು ಆಕೆಯ ಪಾದ ಮುಟ್ಟಿ ನಮಸ್ಕರಿಸಿದೆ” ಎಂದವರು ಹೇಳಿದ್ದಾರೆ.

3  ತಿಂಗಳ ಹಿಂದೆ ತನ್ನನ್ನು ಭೇಟಿಯಾಗಿದ್ದ ರಸೂಲನ್ ಬೀಬಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಎಂದವರು ನೆನಪಿಸಿಕೊಂಡರು. “ನಾನು ಧಮುಪುರಕ್ಕೆ ಬರುತ್ತೇನೆ ಎಂದು ನಾನು ಆಕೆಗೆ ಭರವಸೆ ನೀಡಿದ್ದೆ. ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿರುವುದಕ್ಕೆ ನಾನು ಅವರಿಗೆ ಅಭಾರಿಯಾಗಿದ್ದೇನೆ. ಈ ಮೂಲಕ ನಾನು ವೀರರ ಭೂಮಿಯನ್ನು ನೋಡುವಂತಾಗಿದೆ” ಎಂದು ರಾವತ್ ಹೇಳಿದರು.

“ಜನರಲ್ ರಾವತ್ ನನ್ನ ಮಗನಿದ್ದಂತೆ. ಅವರು ನನ್ನ ಪಾದವನ್ನು ಮುಟ್ಟಿದರು. ಇದು ನನಗೆ ದೊಡ್ಡ ಗೌರವವಾಗಿದೆ. ಅವರು ಎಲ್ಲಾ ರಂಗಗಳಲ್ಲೂ ಯಶಸ್ವಿಯಾಗಲಿ ಎಂದು ನಾನು ಹಾರೈಸುತ್ತೇನೆ. ನನ್ನ ಆಮಂತ್ರಣದ ಮೇರೆಗೆ ಅವರಿಲ್ಲಿಗೆ ಬಂದಿದ್ದರಿಂದ ಸಂತೋಷಗೊಂಡಿದ್ದೇನೆ” ಎಂದು ರಸೂಲನ್ ಬೀಬಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News