ತಗ್ಗಿದ ‘ಇರ್ಮಾ’ ಅಬ್ಬರ: ಟ್ಯಾಂಪಾ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆ

Update: 2017-09-11 15:58 GMT

ಮಿಯಾಮಿ,ಸೆ.11: ಅಮೆರಿಕದ ಫ್ಲಾರಿಡಾ ರಾಜ್ಯಕ್ಕೆ ರವಿವಾರ ಅಪ್ಪಳಿಸಿದ ಇರ್ಮಾ ಚಂಡಮಾರುತದ ಆರ್ಭಟ ಸೋಮವಾರ ತಗ್ಗಿದ್ದು, ಅದರ ತೀವ್ರತೆ ‘ಎ’ ಶ್ರೇಣಿಗೆ ಕುಸಿದಿದೆ. ಇರ್ಮಾ ಚಂಡಮಾರುತ ಫ್ಲಾರಿಡಾದ ನೈರುತ್ಯ ಕರಾವಳಿಯತ್ತ ಧಾವಿಸುತ್ತಿದ್ದು, ಟ್ಯಾಂಪಾ ಪ್ರದೇಶಕ್ಕೆ ಅಪ್ಪಳಿಸುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.

ಇರ್ಮಾದೊಂದಿಗೆ ಬೀಸುತ್ತಿರುವ ಗಾಳಿಯ ವೇಗವು ರವಿವಾರ ಮುಂಜಾನೆ 2ಗಂಟೆಯ ವೇಳೆಗೆ ತಾಸಿಗೆ 85 ಮೈಲುಗಳಷ್ಟು ತಗ್ಗಿರುವುದಾಗಿ ಮೂಲಗಳು ತಿಳಿಸಿವೆ.

 ಇರ್ಮಾ ಚಂಡಮಾರುತವು ದಟ್ಟವಾದ ಜನಸಂಖ್ಯೆಯಿರುವ ನೈರುತ್ಯ ಕರಾವಳಿಯ ಟ್ಯಾಂಪಾ ಕೊಲ್ಲಿ ಪ್ರದೇಶದತ್ತ ಧಾವಿಸುತ್ತಿರುವುದಾಗಿ ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ. ಇದರಿಂದಾಗಿ ಈಶಾನ್ಯ ಫ್ಲಾರಿಡಾದ ಸೈಂಟ್ ಜಾನ್ಸ್ ನದಿ ಸಮೀಪದ ಪ್ರದೇಶಗಳಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ದಿಢೀರ್ ಪ್ರವಾಹ ಸಂಭವಿಸುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 ರವಿವಾರ ದಕ್ಷಿಣ ಫ್ಲಾರಿಡಾದ ಕೇಸ್ ದ್ವೀಪಸಮೂಹದ ಮೇಲೆ ಅಪ್ಪಳಿಸಿದ್ದ ಇರ್ಮಾ ಚಂಡಮಾರುತದ ಹಾವಳಿಗೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದರು. ಫ್ಲಾರಿಡಾಕ್ಕೆ ಅಪ್ಪಳಿಸುವ ಮುನ್ನ ಇರ್ಮಾ ಕೆರಿಬಿಯನ್ ದ್ವೀಪಸಮೂಹದಲ್ಲಿ ಭಾರೀ ಹಾನಿಯುಂಟು ಮಾಡಿದ್ದು, 25ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News