ಮ್ಯಾನ್ಮಾರ್‌ನಲ್ಲಿ ಜನಾಂಗೀಯ ನಿರ್ಮೂಲನೆ ನಡೆಯುತ್ತಿದೆ

Update: 2017-09-11 16:09 GMT

ವಿಶ್ವಸಂಸ್ಥೆ,ಸೆ.11: ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಅಲ್ಪಸಂಖ್ಯಾತರಾದ ರೋಹಿಂಗ್ಯಾ ಮುಸ್ಲಿಮರು ಅನುಭವಿಸುತ್ತಿರುವ ಹಿಂಸೆ ಹಾಗೂ ದೌರ್ಜನ್ಯದ ವಿರುದ್ಧ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆಯ ಮುಖ್ಯಸ್ಥರು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಖ್ನೆ ರಾಜ್ಯದ ಗಲಭೆಗ್ರಸ್ತ ಪ್ರದೇಶಕ್ಕೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆಯ ತನಿಖಾಧಿಕಾರಿಗಳಿಗೆ ಪ್ರವೇಶಿಸಲು ಅನುಮತಿ ನಿರಾಕರಿಸಿರುವುದು, ‘‘ಜನಾಂಗೀಯ ನಿರ್ಮೂಲನೆಗೆ ಒಂದು ಸ್ಪಷ್ಟವಾದ ಉದಾಹರಣೆ’’ಎಂಬಂತೆ ಭಾಸವಾಗುತ್ತಿದೆಯೆಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಅಧಿವೇಶದಲ್ಲಿ ಮಾತನಾಡುತ್ತಿದ್ದ ಸಂಸ್ಥೆಯ ಮುಖ್ಯಸ್ಥ ಝೈದ್ ಅಲ್ ಹಸ್ಸನ್ ಅವರು ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯನ್ನರ ಮಾನವಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

  ರೊಹಿಂಗ್ಯನ್ನರು ಅಧಿಕ ಸಂಖ್ಯೆಯಲ್ಲಿರುವ ರಾಖೈನ್ ರಾಜ್ಯದಲ್ಲಿ ಮ್ಯಾನ್ಮಾರ್ ಸೇನೆಯು ಬೃಹತ್ ಪ್ರಮಾಣದಲ್ಲಿ ಬರ್ಬರವಾದ ಸೇನಾ ಕಾರ್ಯಾಚರಣೆಯನ್ನು ನಡೆಸುತ್ತಿದೆಯೆಂದು ಅವರು ಆರೋಪಿಸಿದರು. ಕಳೆದ ಮೂರು ವಾರಗಳಲ್ಲಿ 2.70 ಲಕ್ಷಕ್ಕೂ ಅಧಿಕ ರೊಹಿಂಗ್ಯಾಗಳು ಮ್ಯಾನ್ಮಾರ್‌ನಿಂದ ಪಲಾಯನಗೈದು ಬಾಂಗ್ಲಾದ ಗಡಿಯನ್ನು ಪ್ರವೇಶಿಸಿದ್ದಾರೆಂದು ಜೋರ್ಡಾನ್ ಯುವರಾಜರೂ ಆದ ಝೈದ್ ಅಲ್ ಹಸ್ಸನ್ ತಿಳಿಸಿದ್ದಾರೆ. ಭದ್ರತಾ ಪಡೆಗಳು ಹಾಗೂ ಸ್ಥಳೀಯ ಬೌದ್ಧ ತೀವ್ರವಾದಿ ಗುಂಪುಗಳು ರೊಹಿಂಗ್ಯಾ ಗ್ರಾಮಗಳನ್ನು ಸುಟ್ಟುಹಾಕುತ್ತಿವೆ ಹಾಗೂ ಕಾನೂನುಬಾಹಿರ ಹತ್ಯೆಗಳನ್ನು ನಡೆಸುತ್ತಿರುವುದಾಗಿ ಅವರು ಆಕ್ರೋಶ ವ್ಯಕ್ತಪಡಿಸಿದರು.

 ಮ್ಯಾನ್ಮಾರ್ ಸರಕಾರವು ಮಾನವ ಹಕ್ಕುಗಳ ತನಿಖಾಧಿಕಾರಿಗಳಿಗೆ ಹಿಂಸಾಗ್ರಸ್ತ ಪ್ರದೇಶಗಳಿಗೆ ಭೇಟಿ ನೀಡಲು ಅವಕಾಶವನ್ನು ನಿರಾಕರಿಸಿರುವುದರಿಂದ ಅಲ್ಲಿನ ಹಾಲಿ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅಂದಾಜಿಸಲು ಸಾಧ್ಯವಿಲ್ಲ. ಆದರೆ ಈ ಸನ್ನಿವೇಶವು ಜನಾಂಗೀಯ ಮೂಲೋತ್ಪಾಟನೆಯ ಸ್ಪಷ್ಟ ಉದಾಹರಣೆಯೆಂಬಂತೆ ಭಾಸವಾಗುತ್ತಿದೆ ಎಂದವರು ಆಘಾತ ವ್ಯಕ್ತಪಡಿಸಿದ್ದಾರೆ. ರೊಹಿಂಗ್ಯನ್ನರು ಬಾಂಗ್ಲಾಗೆ ಪಲಾಯನಗೈಯುವ ದಾರಿಗಳಲ್ಲಿ ಮ್ಯಾನ್ಮಾರ್ ಸೇನೆಯು ನೆಲಬಾಂಬ್ ಆಳವಡಿಸುತ್ತಿರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News