ನಿಗದಿಪಡಿಸಿದ ಪ್ರದೇಶದಲ್ಲಿ ಮಾತ್ರ ಮರುಳುಗಾರಿಕೆ: ಪ್ರಮೋದ್
ಉಡುಪಿ, ಸೆ.11: ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಮುದ್ರದಲ್ಲಿ ದೋಣಿಗಳು ಸಂಚರಿಸಲು ಅಡ್ಡಿಯಾಗಿರುವ ಮರುಳು ದಿಬ್ಬಗಳನ್ನು ಮಾತ್ರ ತೆಗೆಯಲು ಸುಪ್ರೀಂ ಕೋರ್ಟ್‌ನ ಹಸಿರು ಪೀಠ ಅವಕಾಶ ನೀಡಿದೆ ಎಂದು ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟ ಪಡಿಸಿದ್ದಾರೆ.
ಸೋಮವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ ಮಾತನಾಡಿದರು.
ಅರಬೀ ಸಮುದ್ರದಲ್ಲಿ ಮೀನುಗಾರಿಕಾ ದೋಣಿಗಳು ಸುಗಮವಾಗಿ ಸಂಚರಿ ಸಲು ಅಡ್ಡಿಯಾಗಿರುವ ಮರಳು ದಿಬ್ಬಗಳನ್ನು ಸುರತ್ಕಲ್‌ನ ಎನ್‌ಐಟಿಕೆ ತಜ್ಞರ ತಂಡದ ಮೂಲಕ ಗುರುತಿಸಲಾಗಿದ್ದು, ಗುರುತಿಸಿರುವ ಪ್ರದೇಶದಲ್ಲಿ ಮಾತ್ರ ಮರಳು ತೆಗೆಯಲು ಅನುಮತಿ ನೀಡಲಾಗಿದೆ ಹಾಗೂ ತೆಗೆಯುವ ಮರಳನ್ನು ಜಿಲ್ಲೆಯ ಉಪಯೋಗಕ್ಕೆ ಮಾತ್ರ ಬಳಸುವಂತೆ ಮತ್ತು ಯಾವುದೇ ಕಾರಣಕ್ಕೂ ಜಿಲ್ಲೆಯಿಂದ ಹೊರಗೆ ಸಾಗಿಸದಂತೆ ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಮರಳುಗಾರಿಕೆಗೆ ತೆರಳುವ ದೋಣಿಗಳಿಗೆ, ಮರಳು ಸಾಗಿಸುವ ಲಾರಿಗಳಿಗೆ ಇರುವಂತೆ ಜಿಪಿಎಸ್ ಸಾಧನಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಹಾಗೂ ತಮಗೆ ಅವಕಾಶ ನೀಡಿದ ಪ್ರದೇಶ ಬಿಟ್ಟು ಬೇರೆಡೆಯಲ್ಲಿ ಮರಳು ತೆಗೆಯದಂತೆ ಸಚಿವರು ಸೂಚಿಸಿದರು. ಜಿಪಿಎಸ್ ಅಳವಡಿಕೆಯಿಂದ ಮರಳುಗಾರಿಕೆಯ ಪ್ರತಿಯೊಂದು ಮಾಹಿತಿ ಲ್ಯವಾಗಲಿದ್ದು, ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ ಎಂದವರು ತಿಳಿಸಿದರು.
ಮರಳುಗಾರಿಕೆಗೆ ಪರವಾನಿಗೆ ಪಡೆದ ಪ್ರತಿಯೊಬ್ಬ ಗುತ್ತಿಗೆದಾರರು, ತಮಗೆ ನಿಗದಿ ಪಡಿಸಿದ ಜಾಗದಲ್ಲಿ ಮಾತ್ರ ಮರಳು ತೆಗೆಯಬೇಕು. ಅದು ಬಿಟ್ಟು ಸ್ವಲ್ಪ ಆಚೀಚೆಗೆ ಸರಿದರೂ ಅದು ಮರಳು ಗಣಿಗಾರಿಕೆ ಎಂದು ಕರೆಸಿಕೊಳ್ಳಲಿದ್ದು, ಅದನ್ನು ಹಸಿರು ಪೀಠ ನಿಷೇಧಿಸಿದೆ. ಇದು ಹಸಿರುಪೀಠದ ಗಮನಕ್ಕೆ ಬಂದರೆ ಮತ್ತೆ ಮರಳು ತೆಗೆಯಲು ತೊಂದರೆಗಳು ಎದುರಾಗಬಹುದು ಎಂದವರು ನುಡಿದರು.
ಮರಳು ತೆಗೆಯಲು ಪರವಾನಿಗೆ ಪಡೆದಿರುವ ಪ್ರತಿಯೊಬ್ಬರಿಗೂ ಜಿಪಿಎಸ್ ಅಳವಡಿಕೆ ಕುರಿತು ಮಾಹಿತಿ ನೀಡಬೇಕು.ರಾಷ್ಟ್ರೀಯ ಹಸಿರು ಪೀಠ ಹಾಕಿರುವ ಷರತ್ತುಗಳಿಗನುಗುಣವಾಗಿ ಮರಳುಗಾರಿಕೆ ನಡೆಸುವಂತೆ ಎಲ್ಲಾ ಪರ್ಮಿಟ್ ದಾರರಿಗೆ ಸೂಚಿಸಿದ ಸಚಿವರು, ನಿಯಮಗಳನ್ನು ಉಲ್ಲಂಘಿಸಿದಲ್ಲಿ ಹಸಿರು ಪೀಠದಿಂದ ಜಿಲ್ಲೆಯಲ್ಲಿ ಮರುಳುಗಾರಿಕೆಗೆ ಮತ್ತೆ ತಡೆಯಾಜ್ಞೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಕೆದಂಡರಾಮಯ್ಯ ಉಪಸ್ಥಿತರಿದ್ದರು.