ಸರಕಾರಿ ಶಾಲೆಯಲ್ಲಿ ಸನಾತನ ಸಂಸ್ಥೆಯಿಂದ ಬೋಧನೆ: ಆರೋಪ
ಬೆಳ್ತಂಗಡಿ, ಸೆ.11: ನೆರಿಯ ಗ್ರಾಮದ ಬಯಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನಧಿಕೃತವಾಗಿ ಸನಾತನ ಸಂಸ್ಥೆಯವರು ಬೋಧನೆ ಮಾಡುತ್ತಿದ್ದು ಪರೀಕ್ಷೆ ಕೂಡಾ ನಡೆಸಿರುವ ಬಗ್ಗೆ ಸ್ಥಳೀಯರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ, ಶಾಸಕರಿಗೆ ಹಾಗೂ ಗ್ರಾಪಂಗೆ ದೂರು ನೀಡಿದ್ದಾರೆ.
ಸನಾತನ ಸಂಸ್ಥೆಯವರೆನ್ನಲಾದ ಕೆಲವರು ಶಾಲೆಗೆ ಬಂದು ಬೋಧನೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದ್ದು, ಬಳಿಕ ಅವರು ಶಾಲೆಯ ಎಲ್ಲಾ ಮಕ್ಕಳಿಗೂ ಸನಾತನ ಸಂಸ್ಥೆಯ ಹೆಸರಿರುವ ಪ್ರಶ್ನೆಪತ್ರಿಕೆಯನ್ನು ನೀಡಿ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮಕ್ಕಳು ಮನೆಗೆ ತಂದಾಗಲೇ ಈ ವಿಚಾರ ಬಹಿರಂಗಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಶಾಲೆಯಲ್ಲಿ ಎಲ್ಲಾ ಧರ್ಮದ ಮಕ್ಕಳಿಗೂ ಈ ಪರೀಕ್ಷೆಯನ್ನು ನಡೆಸಲಾಗಿದ್ದು, ಇದು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಪೋಷಕರ ಅನುಮತಿಯನ್ನು ಪಡೆಯದೆ ಮಕ್ಕಳಲ್ಲಿ ಮತೀಯ ಭಾವನೆ ಬೆಳೆಸಲು ಕಾನೂನುಬಾಹಿರವಾಗಿ ಸನಾತನ ಸಂಸ್ಥೆ ಇಂತಹ ಕಾರ್ಯ ಮಾಡುತ್ತಿದ್ದು, ಈ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಮಕ್ಕಳಿಗೆ ನೀಡಿರುವ ಪ್ರಶ್ನೆಪತ್ರಿಕೆಯಲ್ಲಿ ನವರಾತ್ರೋತ್ಸವ ಪ್ರಶ್ನೆಮಾಲೆ ಎಂದು ಬರೆಯಲಾಗಿದ್ದು, ಪ್ರಕಾಶಕರು ಸನಾತನ ಸಂಸ್ಥೆ ಎಂದೂ ಮುದ್ರಿತವಾಗಿದೆ. ಕೊನೆಯ ಪುಟದಲ್ಲಿ ಸನಾತನ ಪ್ರಭಾತ ಪತ್ರಿಕೆಯ ಜಾಹೀರಾತೂ ಹಾಕಲಾಗಿದೆ. ಸುಮಾರು ಎಂಬತ್ತಕ್ಕೂ ಅಧಿಕ ಪೋಷಕರು ಸಹಿ ಹಾಕಿರುವ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸಲ್ಲಿಸಲಾಗಿದೆ.
ಈ ವಿಚಾರವಾಗಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಯವರನ್ನು ಪತ್ರಿಕೆ ಸಂಪರ್ಕಿಸಿದಾಗ, ಇಂದು ತಾನು ಕಚೇರಿಯಲ್ಲಿ ಇರಲಿಲ್ಲ ಹಾಗಾಗಿ ವಿಚಾರ ಗಮನಕ್ಕೆ ಬರಲಿಲ್ಲ ನಾಳೆ ಕಚೇರಿಗೆ ತೆರಳಿ ದೂರನ್ನು ಪರಿಶೀಲಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದು ಸೂಕ್ತವಾದ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಪೋಷಕರಿಗೆ ಮಾಹಿತಿ ನೀಡದೆ ಇಂತಹ ತರಗತಿಗಳನ್ನು ಶಾಲೆಯಲ್ಲಿ ನಡೆಸುವುದು ಸರಿಯಲ್ಲ ನಮ್ಮ ಮಕ್ಕಳಿಗೆ ಈ ರೀತಿ ಪಾಠ ಮಾಡಿರುವುದು ಪರೀಕ್ಷೆ ನಡೆಸಿರುವುದು ತಡವಾಗಿ ನಮಗೆ ಗೊತ್ತಾಗಿದೆ ಈ ಬಗ್ಗೆ ದೂರು ನೀಡಿದ್ದೇವೆ. -ಆದಂ, ಬಯಲು ನೆರಿಯ, ವಿದ್ಯಾರ್ಥಿಯೊಬ್ಬರ ಪೋಷಕ