ಬಿಜೆಪಿಯಿಂದ ರಾಮಚಂದ್ರ ಗುಹಾಗೆ ನೋಟಿಸ್

Update: 2017-09-11 17:23 GMT

ಹೊಸದಿಲ್ಲಿ, ಸೆ. 5: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕೈವಾಡವಿದೆ ಎಂದು ಆರೋಪಿಸಿರುವ ಇತಿಹಾಸಕಾರ ರಾಮಚಂದ್ರ ಗುಹಾ ಅವರಿಗೆ ಬಿಜೆಪಿಯ ಕರ್ನಾಟಕ ಘಟಕ ಸೋಮವಾರ ನೋಟಿಸ್ ಕಳುಹಿಸಿದೆ.

 ಮುಂದಿನ ಮೂರು ದಿನಗಳಲ್ಲಿ ನಿಶ್ಯರ್ತ ಕ್ಷಮೆ ಯಾಚಿಸಬೇಕು ಹಾಗೂ ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಗುಹಾ ಅವರಲ್ಲಿ ಬಿಜೆಪಿ ಆಗ್ರಹಿಸಿದೆ. ಒಂದು ವೇಳೆ ರಾಮಚಂದ್ರ ಗುಹಾ ಅವರು ಕ್ಷಮೆ ಯಾಚಿಸದಿದ್ದಲ್ಲಿ ನಮ್ಮ ಪಕ್ಷ ಕಾನೂನು ಕ್ರಮ ಕೈಗೊಳ್ಳಲಿದೆ ಹಾಗೂ ನ್ಯಾಯಾಲಯದ ಮೆಟ್ಟಿಲು ಏರಲಿದೆ. ಗುಹಾ ಮಾತ್ರವಲ್ಲ ಇಂತಹ ಹೇಳಿಕೆಗಳನ್ನು ನೀಡುತ್ತಿರುವ ಪ್ರತಿಯೊಬ್ಬರ ವಿರುದ್ಧವೂ ನೋಟಿಸು ಜಾರಿಗೊಳಿಸಲಾಗುವುದು ಎಂದು ಕರ್ನಾಟಕ ಬಿಜೆಪಿಯ ವಕ್ತಾರ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

  ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ರಾಮಚಂದ್ರ ಗುಹಾ ಅವರು, ಅಟಲ್ ಬಿಹಾರಿ ವಾಜಪೇಯಿ ಒಂದು ಪುಸ್ತಕ ಅಥವಾ ಲೇಖನಕ್ಕೆ ಉತ್ತರ ನೀಡಲು ಇನ್ನೊಂದು ಪುಸ್ತಕ ಅಥವಾ ಲೇಖನ ಬರೆ ಎಂದಿದದ್ದರು. ಆದರೆ, ಇನ್ನು ಮುಂದೆ ವಾಜಪೇಯಿ ಭಾರತದಲ್ಲಿ ನಾವು ಬದುಕಲು ಸಾಧ್ಯವಾಗಲಾರದು ಎಂದಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ಗುಹಾ, ಭಾರತದಲ್ಲಿ ಇಂದು ಸ್ವತಂತ್ರ ಬರಹಗಾರರು ಹಾಗೂ ಪತ್ರಕರ್ತರರಿಗೆ ಕಿರುಕುಳ, ಹಿಂಸೆ, ಕೊನೆಗೆ ಹತ್ಯೆ ಕೂಡ ನಡೆಸಲಾಗುತ್ತದೆ. ಆದರೆ, ನಾವು ಮೌನವಾಗಲಾರೆವು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News